
ಹಿರಿಯೂರು:
ಸಾರ್ವಜನಿಕರು ನಗರಸಭೆ ಸಿಬ್ಬಂದಿಗಳೊಂದಿಗೆ ಕೈಜೋಡಿಸಿ, ಮನೆಯ ಕಸವನ್ನು 3 ಭಾಗ ಮಾಡಿ, ರೆಡ್ಯೂಸ್, ರಿಯೋಸ್, ರಿಸೈಕಲ್ ಮಾದರಿಯನ್ನು ಇಟ್ಟುಕೊಂಡು ತ್ಯಾಜ್ಯ ವಿಲೇವಾರಿ ಮಾಡಬೇಕು, ಇದರಿಂದ ಪರಿಸರ ಸಂರಕ್ಷಣೆ ಮಾಡುವ ಜೊತೆಗೆ ಭೂಮಿಯಲ್ಲಿ ಹಾನಿಕಾರಕ ಅಂಶಗಳು ಸೇರದಂತೆ ತಡೆಗಟ್ಟಬಹುದಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಅವರು ಹೇಳಿದರು.

ನಗರದ ನಗರಸಭೆಯಲ್ಲಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಗರದ ಕಲ್ಯಾಣ ಮಂಟಪಗಳು, ಹಾಗೂ ಹೋಟೆಲ್ ಮಾಲೀಕರುಗಳಿಗೆ ಕರೆಯಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ ಅವರು ಮಾತನಾಡಿ, ಹೋಟೆಲ್ ಮಾಲೀಕರು ತಮ್ಮ ಹೋಟೆಲ್ ಗಳಿಗೆ ಬರುವ ಗ್ರಾಹಕರನ್ನು ದೇವರೆಂದು ತಿಳಿಯಬೇಕು, ಅವರಿಂದ ಹಣ ಪಡೆದು ವಿಷ ಕೊಡಬಾರದು, ಬದಲಾಗಿ ಹೋಟೆಲ್ ನಲ್ಲಿ ಶುಚಿತ್ವ ಹಾಗೂ ರುಚಿಯನ್ನು ಕಾಪಾಡಿಕೊಂಡು ಬಿಸಿಬಿಸಿಯಾದ ಉತ್ತಮ ಆಹಾರವನ್ನು ಪೂರೈಕೆ ಮಾಡುವ ಮೂಲಕ ಸಾರ್ವಜನಿಕರ ಆರೋಗ್ಯ ಸುರಕ್ಷತೆ ಕಾಪಾಡಬೇಕು ಎಂಬುದಾಗಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಹೋಟೆಲ್ ಗಳಲ್ಲಿ, ಹಾಗೂ ಕಲ್ಯಾಣ ಮಂಟಪಗಳಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ ಅತ್ಯಂತ ಅಪಾಯಕಾರಿಯಾಗಿದ್ದು, ಪರಿಸರಕ್ಕೆ ಹಾನಿಯನ್ನು ಉಂಟುಮಾಡುತ್ತದೆ, ಇದರಿಂದ ಪರಿಸರ ನಾಶಕ್ಕೆ ನಾವೇ ದಾರಿಮಾಡಿಕೊಟ್ಟಂತಾಗುತ್ತದೆ, ಪರಿಸರ ಸಂರಕ್ಷಣೆಗಾಗಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿ ಮಾಡಬೇಕು ಎಂಬುದಾಗಿ ಹೇಳಿದರು.

ರೈನ್ ಟ್ರಸ್ಟ್ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಅವರು ಮಾತನಾಡಿ, ಹೋಟೆಲ್ ಗಳಲ್ಲಿ, ಹಾಗೂ ಕಲ್ಯಾಣ ಮಂಟಪಗಳಲ್ಲಿ ಸ್ವಚ್ಛತೆ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಹೋಟೆಲ್ ಮಾಲೀಕರು ಆಹಾರತಯಾರಿಸುವಾಗ ಬಣ್ಣ ಹಾಗೂ ಟೆಸ್ಟಿಂಗ್ ಪೌಡರ್ ಬಳಕೆ ಮಾಡದೇ ಶುಚಿ-ರುಚಿಯಾದ ಆರೋಗ್ಯಕರ ಆಹಾರ ವಿತರಿಸಬೇಕು ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ ಅವರು ಅಂಗಡಿ ಮಾಲೀಕರು, ಹೋಟೆಲ್ ಮಾಲೀಕರು, ಹಾಗೂ ಕಲ್ಯಾಣ ಮಂಟಪದ ಮಾಲೀಕರುಗಳಿಗೆ ನಾವು ಪ್ಲಾಸ್ಟಿಕ್ ನಿಷೇಧಿಸುತ್ತೇವೆ ಹಾಗೂ ಪ್ಲಾಸ್ಟಿಕ್ ಅನ್ನು ಬಳಸುವುದಿಲ್ಲ ಎನ್ನುವ ಪ್ರಮಾಣವಚನವನ್ನು ಬೋಧಿಸಿದರು.

ಈ ಸಭೆಯಲ್ಲಿ ತಾಲ್ಲೂಕು ತಹಶೀಲ್ದಾರ್ ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಮತಾ , ವಿಠ್ಠಲ್, ಸಣ್ಣಪ್ಪ. ಕೆ. ಜಿ. ಗೌಡ ಆರೋಗ್ಯ ನಿರೀಕ್ಷಕರುಗಳಾದ ಸುನೀಲ್, ಸಂಧ್ಯಾ ವೈ.ಎಸ್, ಅಶೋಕ್ ಕುಮಾರ್, ಮಹಾಲಿಂಗರಾಜು, ನಯಾಜ್ ಹಾಗೂ ನೂರಾರು ಜನ ಹೋಟೆಲ್, ಅಂಗಡಿ ಮಾಲೀಕರು ಹಾಗೂ ಹೋಟೆಲ್ ಮಾಲೀಕರು, ಹಾಗೂ ಕಲ್ಯಾಣ ಮಂಟಪದ ಮಾಲೀಕರುಹಾಗೂ ಪತ್ರಕರ್ತರುಗಳು ಉಪಸ್ಥಿತರಿದ್ದರು.

