
ಹಿರಿಯೂರು:
ಪರಿಸರವನ್ನು ಸಂರಕ್ಷಿಸುವ ಹೊಣೆ ಕೇವಲ ಸರ್ಕಾರ, ಅಥವಾ ಇಲಾಖೆಯ ಕೆಲಸವಲ್ಲ, ಪರಿಸರದ ಪ್ರಯೋಜನವನ್ನು ಪಡೆಯುವಂತಹ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯಕವಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ ನಗರಸಭೆ, ಜಿಲ್ಲಾಡಳಿತ ಚಿತ್ರದುರ್ಗ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಪ್ರಾದೇಶಿಕ ಕಚೇರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಡಳಿವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಸ್ಥಳೀಯ ನಗರಸಭೆ ಹಾಗೂ ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ, ಸುತ್ತಮುತ್ತಲಿನ ಪರಿಸರವನ್ನು, ಮರಗಿಡಗಳನ್ನು ಪೋಷಿಸುವ ಮೂಲಕ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣಾಚಾರ್, ಉಪಾಧ್ಯಕ್ಷೆಯಾದ ಶ್ರೀಮತಿ ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

