
ಹಿರಿಯೂರು ;
ತಾಲ್ಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಗಳಿಕಟ್ಟೆ, ಚಿತ್ರದೇವರಟ್ಟಿ, ಶೇಷಪ್ಪನಳ್ಳಿ, ಹಾಲ್ ಮಾದೇನಹಳ್ಳಿ, ಕೆಕೆ ಹಟ್ಟಿ, ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳು ವಿದ್ಯುತ್ ಇಲ್ಲದೆ ನೆನ್ನೆ ಸಂಜೆ 4 ಗಂಟೆಯಿಂದ ಕತ್ತಲಲ್ಲೇ ಕಳೆಯುವಂತಾಗಿದ್ದು, ಗ್ರಾಮೀಣ ಜನರು ಕತ್ತಲಲ್ಲಿ ಪರದಾಡುವಂತಾಗಿದೆ ಎಂಬುದಾಗಿ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಆರ್.ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮಗಳಲ್ಲಿ ಹೇಳುವುದಕ್ಕೆ ನಿರಂತರ ಜ್ಯೋತಿ ವಿದ್ಯುತ್ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ವಿದ್ಯುತ್ ಕೊಡುವಲ್ಲಿ ಮಾತ್ರ ಬೆಸ್ಕಾಂ ಇಲಾಖೆ ಹಾಗೂ ಸಿಬ್ಬಂದಿಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಗ್ರಾಮೀಣ ಜನರಿಗೆ ಸರಿಯಾಗಿ ವಿದ್ಯುತ್ ಕೊಡುವಲ್ಲಿ ವಿಫಲಗೊಂಡಿದ್ದಾರೆ, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂಬುದಾಗಿ ಅವರು ಆಪಾದಿಸಿದ್ದಾರೆ.
ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಹೆಂಗಸರು, ಮಕ್ಕಳು ಹಾಗೂ ವಯೋವೃದ್ಧರಿಗೆ ಹೊರಗೆ ಓಡಾಡಲು ತುಂಬಾ ಸಮಸ್ಯೆಯಾಗಿದೆ. ಅಲ್ಲದೆ ರಾತ್ರಿಯ ಸಮಯದಲ್ಲಿ ಕಾಡುಪ್ರಾಣಿಗಳ ಹಾವಳಿಯಿದ್ದು, ಕಳಪೆ ಮಟ್ಟದ ಕೇಬಲ್ ಅಳವಡಿಸಿರುವುದೇ ಈ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದೆ, ಇದು ನಾಗರೀಕ ಪ್ರಪಂಚದ ದುರಂತವೇ ಸರಿ ಎಂಬುದಾಗಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕೂಡಲೇ ಸ್ಥಳೀಯ ಬೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು, ಕ್ಷೇತ್ರದ ಸಚಿವರಾದ ಡಿ.ಸುಧಾಕರ್ ರವರು ಇತ್ತ ಗಮನ ಹರಿಸುವ ಮೂಲಕ ಯಲ್ಲದಕೆರೆ ಭಾಗದ ಜನರ ಸಮಸ್ಯೆ ಬಗೆಹರಿಸಬೇಕಾಗಿ ಕಲ್ವಳ್ಳಿ ಭಾಗದ ಗ್ರಾಮಸ್ಥರು ಮಾನ್ಯ ಸಚಿವರಲ್ಲಿ ಮನವಿ ಮಾಡಿದ್ದಾರೆ.

