March 3, 2026
00001

ಹಿರಿಯೂರು:

ಶಿಕ್ಷಕ ವೃತ್ತಿಯು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದ್ದು, ಶಿಕ್ಷಕರು ಪ್ರಾಮಾಣಿಕತೆ, ದಕ್ಷತೆ, ಸೇವಾಪರಿಕಲ್ಪನೆ,  ಜ್ಞಾನ, ಉತ್ತಮ ನಡೆ-ನುಡಿಗೆ ಹೆಸರಾಗಿದ್ದು, ವಿದ್ಯಾರ್ಥಿಗಳಲ್ಲಿಯೂ ಇಂತಹ ಮಾನವೀಯ ಮೌಲ್ಯಗಳನ್ನು ಬೆಳೆಸುವರು, ಇಂತಹ ಶಿಕ್ಷಕರನ್ನು ಗೌರವಿಸಿ, ಸನ್ಮಾನಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ  ನಿವೃತ್ತ ಶಿಕ್ಷಕರಾದ ಹೆಚ್. ಆರ್. ವೆಂಕಟರಾಮು ಅವರು ಹೇಳಿದರು.

ತಾಲ್ಲೂಕಿನ ವಾಣಿವಿಲಾಸಪುರ ಪ್ರೌಢಶಾಲೆಯಲ್ಲಿ 1999-2000 ನೇ ಬ್ಯಾಚ್ ನಲ್ಲಿ ವ್ಯಾಸಂಗ ಮಾಡಿದ “ಗೋಲ್ಡನ್ ಗ್ಯಾಂಗ್” ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ನೇಹಸಮ್ಮಿಲನ ಹಾಗೂ ವಿದ್ಯ ಕಲಿಸಿದ ಶಿಕ್ಷಕರುಗಳಿಗೆ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿವೃತ್ತ ಶಿಕ್ಷಕಿ ರೇಣುಕಾರವರು  ಮಾತನಾಡಿ, ಶಿಕ್ಷಣವಂತರಾಗಿ ವಿದ್ಯೆಯ ಜೊತೆ ಆರ್ಥಿಕ ಹಾಗೂ ಮೌಲ್ಯದ ಸಬಲತೆಯನ್ನು ಪಡೆದುಕೊಂಡ ನೀವೆಲ್ಲರೂ ಬಾಲ್ಯದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ನೆನೆಯುವ ಉದ್ದೇಶದಿಂದ ಇಂದು ನಮ್ಮೆಲ್ಲರನ್ನು ಗೌರವಿಸಿ, ಸನ್ಮಾನಿಸುತ್ತಿರುವುದು ಸಂತಸದ ವಿಚಾರವಾಗಿದ್ದು, ನಿಮ್ಮ ಪ್ರೀತಿಗೆ ಬೆಲೆ ಕಟ್ಟಲಾಗದು ಎಂಬುದಾಗಿ ಅವರು ಹೇಳಿದರು.

ಶಿಕ್ಷಕರಾದ ಕೃಷ್ಣಪ್ಪ ಅವರು  ಮಾತನಾಡಿ,  ಇಂದು  ಸಮಾಜದ ಮಧ್ಯೆ ನಿಮ್ಮದೇ ಆದ ವೃತ್ತಿಯನ್ನು ಮಾಡಿಕೊಂಡು ಬದುಕನ್ನು ಸಾಗಿಸುತ್ತಿರುವ ನೀವುಗಳು ನಿಮ್ಮ ಕೆಲಸದ ಮಧ್ಯೆಯೂ ಬಾಲ್ಯದಲ್ಲಿ ಕಲಿಸಿದ ಶಿಕ್ಷಕರನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸುವ ಕೆಲಸ ನಿಜಕ್ಕೂ ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂಬುದಾಗಿ ಹೇಳಿದರು.   

ಇದೇ ಸಂದರ್ಭದಲ್ಲಿ ಸುಮಾರು 25-26 ವರ್ಷಗಳ ನಂತರ 41 ಹಳೆ ಗೆಳೆಯರೆಲ್ಲರೂ ಒಟ್ಟುಗೂಡಿ ಗುರುಗಳ ಪಾದಪೂಜೆ ನೆರವೇರಿಸಿ, ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸ್ಮಿತಾ. ಆಶಾ.ಸಂದ್ಯಾ. ಅಶು.ಪಾಂಡುರಂಗ. ಇರ್ಫಾನ್  ತಮ್ಮ ಶಾಲಾ ದಿನಗಳನ್ನು ಬಾಲ್ಯದ ಕ್ಷಣಗಳನ್ನು ನೆನೆದರು.

ಇದೇ ಸಂದರ್ಭದಲ್ಲಿ ಶಾಲೆಗೆ 2 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಶಾಲೆಗೆ ಕಾಣಿಕೆಯಾಗಿ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಸವಿತಾ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ತಿಮ್ಮರಾಯಪ್ಪ, ಆರ್. ಕೃಷ್ಣಪ್ಪ, ಹೆಚ್.ಆರ್. ವೆಂಕಟರಾಮು, ಕೆ.ಆರ್.ತಿಪ್ಪೇಸ್ವಾಮಿ, ಸೇರಿದಂತೆ ಹಳೆಯ ವಿದ್ಯಾರ್ಥಿಗಳ ಬಳಗದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *