
ಹಿರಿಯೂರು:
ತಾಲ್ಲೂಕಿನ ಬಬ್ಬೂರು ಫಾರಂನ ಭಾರತೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸದೇ ನಿರ್ಲಕ್ಷ್ಯ ವಹಿಸಲಾಗುತ್ತಿದ್ದು, ಕೇಂದ್ರ ಸರ್ಕಾರ ದನ- ಧಾನ್ಯ ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ರೈತ ಸಂಘಟನೆಯ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸದೆ ನಿರ್ಲಕ್ಷ ವಹಿಸಿರುತ್ತಾರೆ ಎಂಬುದಾಗಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.
ತಾಲ್ಲೂಕಿನ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸದೇ ನಿರ್ಲಕ್ಷ್ಯ ವಹಿಸುತ್ತಿರುವುದರ ಕುರಿತು ರೈತಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಭಾರತೀಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಪರಶುರಾಮಚಂದ್ರವಂಶಿರವರ ಮೂಲಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಯಾವುದೇ ಹೊಸ ತಳಿ ಬೀಜ ಉತ್ಪಾದನೆ ಆಗುತ್ತಿಲ್ಲ. ಹೋಬಳಿಗೆ ಒಂದು ಗ್ರಾಮ ಆಯ್ಕೆ ಮಾಡಿಕೊಂಡು ಆ ಗ್ರಾಮದ ರೈತರ ಭೂಮಿಯಲ್ಲಿ ಹೊಸ ಬೀಜ ಉತ್ಪಾದನೆ ಮತ್ತು ಸಂಸ್ಕರಣೆ ಮಾಡುತ್ತಿಲ್ಲ. ಬೀಜ ಘಟಕದಲ್ಲಿ ಯಾವುದೇ ಬೀಜ ಸಂಗ್ರಹಣೆ ಇರುವುದಿಲ್ಲ. ಹೊಸ ತಳಿಯ ಜಾನುವಾರುಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಾಕಿರುವ ಜಾನುವಾರುಗಳು ರೈತರಿಗೆ ವಿತರಿಸುವಲ್ಲಿ ತಾರತಮ್ಯಮಾಡಲಾಗುತ್ತಿದೆ ಎಂದರಲ್ಲದೆ,
ರೈತರು ಬೆಳೆದ ಬೆಳೆಗಳ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯ ಕಟ್ಟಿ ಆರೇಳು ವರ್ಷಗಳಾದರೂ ಕಾರ್ಯ ನಿರ್ವಹಿಸುತ್ತಿಲ್ಲ, ರೈತರಿಗೆ ಮಣ್ಣು, ನೀರು ಪರೀಕ್ಷೆ ಮಾಡಲು 300ರೂ ತೆಗೆದುಕೊಳ್ಳುತ್ತಾರೆ. ರಿಪೋರ್ಟ್ ಕೊಡಲು 25 ರಿಂದ 30 ದಿನಗಳು ಸಮಯ ತೆಗೆದುಕೊಳ್ಳುತ್ತಾರೆ. ಮಣ್ಣು, ನೀರು ಪರೀಕ್ಷೆ ಮಾಡಿದ ರೈತರಿಗೆ ಮಣ್ಣಿನಲ್ಲಿರುವ ಸತ್ವದ ಬಗ್ಗೆ ಮತ್ತು ಕೆಲವು ಲವಣಗಳನ್ನು ಬದಲಾಯಿಸಿಕೊಳ್ಳುವ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡುವುದಿಲ್ಲ ಎಂಬುದಾಗಿ ಅವರು ಆಪಾದಿಸಿದರು.
ತೋಟಗಾರಿಕೆ ವಿಭಾಗದಲ್ಲಿ ಯಾವುದೇ ವಿಧವಾದ ಹೊಸಹೊಸ ತಳಿಯ ತೋಟಗಾರಿಕೆ ಸಸಿಗಳು ದೊರೆಯುವುದಿಲ್ಲ. ತೋಟಗಾರಿಕೆ ಕೈಗಾರಿಕಾ ವಿಭಾಗದಲ್ಲಿ ಯಾವುದೇ ಹೊಸ ಯಂತ್ರಗಳನ್ನು ಅಭಿವೃದ್ಧಿಪಡಿಸದೆ ರೈತರಿಗೆ ಮಾರ್ಗದರ್ಶನ ನೀಡದೆ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ.
ಇನ್ನು ಕೃಷಿ ಇಲಾಖೆಯ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೆ ತರಬೇತಿಗೆ ಮಾತ್ರ ಸೀಮಿತವಾಗಿದೆ. ಇಲಾಖೆಯಿಂದ ಅನೇಕ ಬಿಲ್ಡಿಂಗ್ ಗಳನ್ನು ಕಟ್ಟಿ ಅವು ಎಲ್ಲವೂ ಖಾಲಿ ಇದ್ದಾವೆ ಮುಂತಾದ ಅನೇಕ ಸಮಸ್ಯೆಗಳಲ್ಲಿ ಬಳಲುತ್ತಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ 5 ವರ್ಷದಿಂದ ಇಲ್ಲಿಯವರೆಗೆ ಆಗಿರುವ ಎಲ್ಲಾ ಅವ್ಯವಹಾರ, ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಒತ್ತಾಯಿಸಿದರು.

ತೋಟಗಾರಿಕೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಮತ್ತು ಹಾಸ್ಟೆಲಿನಲ್ಲಿರುವ ವಿದ್ಯಾರ್ಥಿಗಳಿಗೆ ಆಹಾರದ ಕ್ರಮದಲ್ಲಿ ಸರಿಯಾದ ವ್ಯತ್ಯಾಸ ಇಲ್ಲ, ಇದನ್ನು ಹೇಳಿಕೊಳ್ಳಲು ವಿದ್ಯಾರ್ಥಿಗಳು ಹಿಂಜರಿಯುತ್ತಾರೆ, ಈ ಕೂಡಲೇ ಇರುವ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದಿಂದ ಬದಲಾಯಿಸಿ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರಕ್ಕೆ ಜೆ.ಕೆ.ವಿ.ಕೆ.ಗೆ ಹಿರಿಯೂರು ತೋಟಗಾರಿಕಾ ಕಾಲೇಜು ಕೃಷಿ ಸಂಶೋಧನಾ ಕೇಂದ್ರವನ್ನು ತಕ್ಷಣ ಬದಲಾಯಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ನಮ್ಮ ಈ ಎಲ್ಲಾ ಒತ್ತಾಯಗಳನ್ನು 7 ದಿನಗಳೊಳಗಾಗಿ ಕಾರ್ಯಗತಗೊಳಿಸದೆ ಇದ್ದಲ್ಲಿ ತಮ್ಮ ಕೃಷಿ ಇಲಾಖೆಯ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಅವರು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಈ ಧರಣಿಯಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಆಲೂರುಸಿದ್ದರಾಮಣ್ಣ, ರೈತಮುಖಂಡರುಗಳಾದ ವೀರನಗೌಡ, ರಂಗಸ್ವಾಮಿ, ಜಯಣ್ಣ, ರಮೇಶ್, ಶಿವಣ್ಣ, ಸಣ್ಣತಿಮ್ಮಣ್ಣ, ಮಂಜುನಾಥ್, ವೀರಣ್ಣ, ರಮೇಶ್, ತಿಮ್ಮಾರೆಡ್ಡಿ, ಬಿ.ಆರ್.ರಂಗಸ್ವಾಮಿ, ಮೆಹಬೂಬ್, ಕರಿಯಪ್ಪ, ನಾಗಣ್ಣ ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.
