
ಹಿರಿಯೂರು:
ತಾಲ್ಲೂಕಿನ ಆದಿವಾಲ ಗ್ರಾಮಪಂಚಾಯಿತಿ ಕಚೇರಿಯಲ್ಲಿ ರಜಾದಿನವಾದ ಭಾನುವಾರ ಗ್ರಾಮಪಂಚಾಯಿತಿ ಸದಸ್ಯರೊಬ್ಬರು ಯಾರು ಇಲ್ಲದ ಸಮಯ ನೋಡಿಕೊಂಡು ಖಾಸಗಿ ಕಂಪ್ಯೂಟರ್ ನಿರ್ವಾಹಕನನ್ನು ಕರೆದೊಯ್ದು ಪಂಚಾಯಿತಿ ಕಚೇರಿ ಬೀಗ ತೆಗೆಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಮುಂದಾದಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಖಾಸಗಿ ಕಂಪ್ಯೂಟರ್ ನಿರ್ವಾಹಕ ನರೇಂದ್ರ ಮತ್ತು ಸದಸ್ಯ ಮುನೀರ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ದೃಶ್ಯಯವನ್ನು ಸೆರೆಹಿಡಿದ ಗ್ರಾಮದ ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್ ಅವರು ಭಾನುವಾರ ವೀಡಿಯೋದೊಂದಿಗೆ ಪಿ.ಡಿ.ಒ. ಜ್ಯೋತಿವೈಜನಾಥ್ ಅವರಿಗೆ ಪತ್ರ ಬರೆದಿದ್ದು, ಅದರನ್ವಯ ಸೋಮವಾರ ಗ್ರಾಮಾಂತರ ಠಾಣೆಗೆ ಹಾಗೂ ತಾಲ್ಲೂಕು ಪಂಚಾಯಿತಿ ಇ.ಒ.ಗೆ ಪಿ.ಡಿ.ಒ. ದೂರು ನೀಡಿದ್ದಾರೆ.
ಗ್ರಾಮಪಂಚಾಯಿತಿ ಕಚೇರಿಯಲ್ಲಿ ರಜಾ ದಿನದಂದು ಕಚೇರಿ ಸಿಬ್ಬಂದಿ ಮಾತ್ರ ಬಳಸಬಹುದಾದ ಕಂಪ್ಯೂಟರ್ ಅನ್ನು ಚುನಾಯಿತ ಸದಸ್ಯರೊಬ್ಬರು ಬೇರೆ ವ್ಯಕ್ತಿಯ ಮೂಲಕ ಆನ್ ಮಾಡಿಸಿರುವುದು ಹಲವು ಸಂಶಯಗಳಿಗೆ ಎಡೆಮಾಡಕೊಟ್ಟಿದೆ.
ಗ್ರಾಮಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿಯುವ ಹಂತದಲ್ಲಿದ್ದು, ಪಂಚಾಯಿತಿ ಸದಸ್ಯರು ತಮ್ಮಅಕ್ರಮಗಳನ್ನು, ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಗೋಪ್ಯವಾಗಿರಬೇಕಾದ ಲಾಗಿನ್ ಗಳನ್ನು ಬಳಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವ ಸಂಶಯ ಕಾಡುತ್ತಿದೆ.
ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂಬುದಾಗಿ ಚಮನ್ ಷರೀಫ್ ಅವರು ಒತ್ತಾಯಿಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

