
ಹಿರಿಯೂರು :
ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳಾಗಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೇ ಸಮಯ ವ್ಯರ್ಥಮಾಡುತ್ತಿದ್ದೀರಾ, “ಜನತೆ ತೆರಿಗೆ ಕಟ್ಟಿದ್ದು ನಿಮ್ಮ ಸಂಬಳಕ್ಕೆ ಹೊರತು ಕುರ್ಚಿಯಲ್ಲಿ ಕೂತು ಸಮಯ ಕಳೆಯಲು ಅಲ್ಲ” ಎಂಬುದಾಗಿ ತಾಲ್ಲೂಕು ಬಿ.ಜೆ.ಪಿ. ಮಂಡಲ ಅಧ್ಯಕ್ಷರಾದ ಅಭಿನಂದನ್ ಅವರು ಖಡಕ್ ಎಚ್ಚರಿಕೆ ನೀಡಿದರು.

ನಗರದ ಸರ್ಕಾರಿ ಆಸ್ಪತ್ರೆಗೆ ಅಚಾನಕ್ ಭೇಟಿ ನೀಡಿದ ಅವರು ಅಲ್ಲಿನ ಅವ್ಯವಸ್ಥೆಯನ್ನು ಸ್ವತಃ ಕಣ್ಣಾರೆ ವೀಕ್ಷಿಸಿ. ಸಾಮಾನ್ಯ ಜನರಿಗೆ ನೀಡಬೇಕಾದ ಆರೋಗ್ಯ ಸೇವೆಯಲ್ಲಿ ವೈದ್ಯರು ತೋರಿಸುತ್ತಿದ್ದ ನಿರ್ಲಕ್ಷ್ಯ, ಅಗತ್ಯ ಔಷಧಿಗಳ ಕೊರತೆ, ಆಸ್ಪತ್ರೆಯಲ್ಲಿ ಕಂಡುಬಂದ ಅಸಮರ್ಪಕ ನಿರ್ವಹಣೆ ಕಂಡು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ರೋಗಿಗಳಿಗೆ ಸರಿಯಾದ ಸಮಯಕ್ಕೆ ಹೃದಯ ಸಂಬಂಧಿತ ಔಷದಿಗಳು, ಚಿಕಿತ್ಸೆ ಕೊಡದೇ ತಿರುಗಾಡುವಂತೆ ಮಾಡುತ್ತಿದ್ದ ಔಷಧಿ ವಿತರಕರ ವಿರುದ್ಧವೂ ಸಹ ಕಿಡಿ ಕಾರಿದರಲ್ಲದೆ ಜನರ ಆರೋಗ್ಯದ ಪ್ರಶ್ನೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂಬುದಾಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದರು.

“ಸರ್ಕಾರಿ ಆಸ್ಪತ್ರೆ ಸಾರ್ವಜನಿಕರ ಹಕ್ಕು, ಕೆಲವರ ಸ್ವಂತ ಆಸ್ತಿ ಅಲ್ಲ”ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ, ರೋಗಿಗಳ ಸೇವೆ ಮಾಡುವ ಬದಲು ಬೇಜವಾಬ್ದಾರಿತನ ತೋರಿಸುವವರ ಬಗ್ಗೆ ಸಂಬಂಧಿತ ಇಲಾಖೆಗೆ ವರದಿ ಕಳುಹಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದರು.

