
ಹಿರಿಯೂರು :
ರಾಮಾಯಣದಂತಹ ಅಧ್ಭುತ ಕೃತಿಯನ್ನು ರಚಿಸುವ ಮೂಲಕ ವಿಶ್ವಕ್ಕೆ ಮಾನವೀಯ ಗುಣಗಳನ್ನು ಸಾರಿದ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ. ಅವರ ತತ್ವ, ಆದರ್ಶಗಳು ಅನುಕರಣೀಯವಾಗಿದ್ದು, ವಿದ್ಯಾರ್ಥಿಗಳಾದ ನೀವು ಇಂತಹ ಮಹಾನ್ ವ್ಯಕ್ತಿಗಳ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂಬ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಜಗತ್ತಿಗೆ ಅತ್ಯಂತ ಶ್ರೇಷ್ಠವಾದ ರಾಮಾಯಣ ಮಹಾಕಾವ್ಯವನ್ನು ಕೊಡುಗೆಯಾಗಿ ನೀಡಿದ ಮಹರ್ಷಿ ವಾಲ್ಮೀಕಿಯವರು ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದು, ಇವರನ್ನು ಯಾವುದೇ ಒಂದು ಜಾತಿ-ಜನಾಂಗಕ್ಕೆ ಸೀಮಿತಗೊಳಿಸದೇ ಸಮಾಜದ ಪ್ರತಿಯೊಬ್ಬರೂ ಆರಾಧಿಸುವಂತಾಗಬೇಕು, ಆಗ ಮಾತ್ರ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆದು ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿಯವರಿಗೆ ನಾವುಗಳು ಗೌರವ ಕೊಟ್ಟಂತಾಗುತ್ತದೆ ಎಂಬುದಾಗಿ ಹೇಳಿದರು.

ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯದ ಮೂಲಕ ಸಾದರಪಡಿಸಿದ ಆದರ್ಶಗಳನ್ನು ಇಂದಿನ ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ತತ್ವವನ್ನು ಮಹಾಕಾವ್ಯದ ಮೂಲಕ ವಿಶ್ವಕ್ಕೆ ಸಾರಿದ ಮಹರ್ಷಿ ವಾಲ್ಮೀಕಿಯವರು ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರರಾಗಿದ್ದು, ಇಂತಹ ರಾಮಾಯಣ ಮಹಾಕಾವ್ಯದ ಸಾರಾಂಶವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂಬುದಾಗಿ ಹೇಳಿದರು.
ಉಪನ್ಯಾಸಕ ಉಮೇಶ್ ಯಾದವ್ ಮಾತನಾಡಿ, ಕಾಡಿನಲ್ಲಿ ಬೇಡನಾದ ರತ್ನಾಕರ ತಪಸ್ಸು ಮಾಡಿ, ವಾಲ್ಮೀಕಿಯಾಗಿ ಪರಿವರ್ತನೆಯಾಗಿ ವಿಶ್ವಕ್ಕೆ ಮಹಾಗ್ರಂಥವಾಗಿ ಪರಿಚಿತವಾದ ರಾಮಾಯಣ ಮಹಾಕಾವ್ಯ ಬರೆದಂತೆ ಇಂದಿನ ವಿದ್ಯಾರ್ಥಿಗಳು ತಮ್ಮಲ್ಲಿರುವ ದುಷ್ಟಗುಣಗಳನ್ನು ನಾಶಗೊಳಿಸಿ, ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕಿದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕರಾದ ಶ್ರೀಮತಿ ವಸಂತಾ, ಕೋಆರ್ಡಿನೇಟರ್ ಶ್ರೀಮತಿ ನಂದಿನಿ, ಶಿಕ್ಷಕಿಯರುಗಳಾದ ಶ್ರೀಮತಿ ರಂಜಿತಾ, ಶ್ರೀಮತಿ ಸಬೀಹಾ, ಶ್ರೀಮತಿ ಮುಬೀನಾ, ಶ್ರೀಮತಿ ಹೇಮಲತಾ, ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಶ್ರೀಮತಿ ಸುಲೋಚನಾ, ಶ್ರೀಮತಿ ಮಮತಾ, ದ್ರಾಕ್ಷಾಯಣಿ, ಪೂಜಾ, ಶಿವರಾಜ್, ಅರವಿಂದ್, ಸುರೇಶ್, ಪ್ರಭಾಕರ್, ಸೇರಿದಂತೆ ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

