
ಹಿರಿಯೂರು :
ರಾಜ್ಯದ 18 ಜಿಲ್ಲೆ 46 ತಾಲೂಕುಗಳಲ್ಲಿ ಹರಿದು ಹಂಚಿ ಹೋಗಿರುವ ಕುಂಚಿಟಿಗರನ್ನು ಕುಲ ಬೆಡಗುಗಳ ಆಧಾರದ ಮೇಲೆ ಸಾಮಾಜಿಕಜಾಲತಾಣಗಳ ನೆರವಿನಿಂದ ಒಗ್ಗೂಡಿಸಲಾಗುತ್ತಿದೆ, ಇಂಥ ಸಂದರ್ಭದಲ್ಲಿ ಕೆಲವೊಬ್ಬರು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಆಲದ ಮರ, ಬೇರು, ಬೀಳುಲು ಇತ್ಯಾದಿಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ಕುಂಚಿಟಿಗರನ್ನು ದಾರಿ ತಪ್ಪಿಸುತ್ತ ತಮ್ಮ ಅಧಿಕಾರ ಲಾಲಸೆಗಾಗಿ ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂಬುದಾಗಿ ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಹೇಳಿದರು.
ನಗರದ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಕುಂಚಿಟಿಗರ ಸಮಾಜದ ವತಿಯಿಂದ ನಡೆಸಲಾದ ಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂತಹ ಪ್ರಬಲ ಕಿಡಿಗೇಡಿಗಳ ಮಾತಿಗೆ ಗಮನಕೊಡದೆ ಜಾತಿಗಣತಿಯಲ್ಲಿ ತಮ್ಮ ಪಿತೃ ಸಂಬಂಧಿ ಮಾತೃ ಸಂಬಂಧಿ ಜಾತಿಗಳನ್ನು ಬರೆಸುವ ಮೂಲಕ ಕುಂಚಿಟಿಗ ಸಮುದಾಯದ ಬಲವನ್ನು ಪ್ರದರ್ಶಿಸಬೇಕು ಎಂಬುದಾಗಿ ಮನವಿ ಮಾಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಕುಂಚಿಟಿಗರ ಒಕ್ಕೂಟದ ಗೌರವಾಧ್ಯಕ್ಷರಾದ ಗಡಾರಿಕೃಷ್ಣಪ್ಪನವರು ವಹಿಸಿದ್ದರು, ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಜಿ.ಹೆಚ್.ಗೌಡ. ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಜೋಗೇಶ್, ಪಿಲಾಜನಹಳ್ಳಿ ರಾಮಸ್ವಾಮಿ, ಕಾತ್ರಿಕೇನಳ್ಳಿ ಮಂಜುನಾಥ್, ಯಳನಾಡು ಚೇತನ್, ಕೆ.ಕೆ.ಹಟ್ಟಿ ಜಯಪ್ರಕಾಶ್ ಉಪಸ್ಥಿತರಿದ್ದರು.

