October 6, 2025
03

ಹಿರಿಯೂರು :

ವೇದಾವತಿ ನಗರದ 3ನೇ ವಾರ್ಡ್ ಚಂದ್ರಾಲೇಔಟ್ ಮತ್ತು ಉಪ್ಪಾರ ಸಮಾಜದ ಸಂಪರ್ಕ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರವಾಗಿ ನಗರದ ನಗರಸಭೆ ಕಮಿಷನರ್ ನಿಯಮಾನುಸಾರ ಕ್ರಮ ಜರುಗಿಸದೆ ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡುತ್ತಿಲ್ಲ ಎಂಬುದಾಗಿ  ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್   ಅವರು  ಆರೋಪಿಸಿದ್ದಾರೆ.

ಈ ವಿಚಾರವಾಗಿ 2025ರ ಮೇ 28 ರಂದು  ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಕೈಗೊಂಡ ಸಭಾ ನಡಾವಳಿಯಲ್ಲಿ ಜೂನ್ ಎರಡನೇ ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ರಸ್ತೆ ಬಿಡಿಸಿಕೊಡಲು ಸಭೆಯಲ್ಲಿ ತೀರ್ಮಾನಿಸಿ 2ತಿಂಗಳು ಕಳೆದಿವೆ  ಎಂಬುದಾಗಿ ಅವರು ಹೇಳಿದರು.

ಮಾನ್ಯ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಇವರಿಗೆ ಪುನರ್ ಜ್ಞಾಪನಾ ಆದೇಶ ಹೊರಡಿಸಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಚಂದ್ರಾಲೇ ಔಟ್ ರಸ್ತೆ ತೆರವು ಮಾಡಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಭಾಗದ ರಸ್ತೆ ಸಮಸ್ಯೆ ಇತ್ಯರ್ಥಕ್ಕೆ 2010 ರಲ್ಲಿಯೇ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ ಎಂದರಲ್ಲದೆ,

ಇತ್ತೀಚೆಗೆ ಲೋಕಾಯುಕ್ತ ಆದೇಶ, ಮಾನವ ಹಕ್ಕುಗಳ ಆಯೋಗದ ನಿರ್ದೇಶನ ಹಾಗೂ ಈಗಿನ ಜಿಲ್ಲಾಧಿಕಾರಿಗಳು ಕೂಡ ಆದೇಶ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರೂ ರಸ್ತೆ ಒತ್ತುವರಿ ತೆರವು ಮಾಡಿಸಲು  ಪತ್ರ ಕೊಟ್ಟಿದ್ದಾರೆ.

ಅಲ್ಲದೆ, ತಹಶೀಲ್ದಾರರು ರಸ್ತೆ ಗಡಿ ಗುರುತು ಮಾಡಲು ಡಿ.ಜಿ.ಪಿ.ಎಸ್. ಸರ್ವೇ     ಮಾಡಿಸಿದ್ದಾರೆ. ಐ.ಪಿ.ಜಿ.ಆರ್.ಎಸ್. ನಲ್ಲಿ ರಸ್ತೆ ಮತ್ತು ಉದ್ಯಾನವನ ಜಾಗ ಒತ್ತುವರಿ ತೆರವು ಮಾಡಿಸಿಕೊಡಲು ಸಲ್ಲಿಸಿದ 26 ದೂರುಗಳಿಗೆ ಸುಳ್ಳು ವರದಿ ಅಪ್ಲೋಡ್ ಮಾಡಿ ಕಂಪ್ಲೆಂಟ್ ಮುಕ್ತಾಯ ಮಾಡಿದ್ದಾರೆ ಎಂಬುದಾಗಿ ಅವರು ಆರೋಪಿಸಿದರು.

ಉದ್ಯಾನವನ ನಾಮಫಲಕ ಕಿತ್ತುಹಾಕಿ ರಸ್ತೆ ಒತ್ತುವರಿ ಮಾಡಿರುವ ಬಡಾವಣೆ ಮಾಲೀಕರ ವಿರುದ್ಧ ಸಕಾಲದಲ್ಲಿ ಕ್ರಮ ಜರುಗಿಸದೆ ಅಧಿಕಾರಿಗಳು ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ, ಅಲ್ಲದೆ ಒಂದು ರೀತಿಯ ಅಧಿಕಾರಶಾಹಿ ಅಸಡ್ಡೆ ಮಾಡುತ್ತಿದ್ದಾರೆ. ಅಲ್ಲದೆ ಕಾನೂನು ಉಲ್ಲಂಘನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದವರಿಗೆ ರಾಜ ಮರ್ಯಾದೆ ಕೊಡುವ ಪರಿಪಾಠ ಶುರು ಮಾಡಿದ್ದಾರೆ  ಎಂದರಲ್ಲದೆ,

ಆದಪ್ರಯುಕ್ತ ಚಿತ್ರದುರ್ಗ ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ 3 ನೇ ವಾರ್ಡ್ ನಾಗರೀಕರಿಗೆ ರಸ್ತೆ ಮತ್ತು ಉದ್ಯಾನವನ ಜಾಗಗಳ ಒತ್ತುವರಿ ತೆರವು ಮಾಡಿಸಿಕೊಡುವಂತೆ ನಾಗರೀಕ ಹಿತರಕ್ಷಣಾ ವೇದಿಕೆ ಮುಖಂಡರಾದ ಎಸ್.ವಿ.ರಂಗನಾಥ್ ಜಿಲ್ಲಾಧಿಕಾರಿಗಳಿಗೆ ಅವರು ಮನವಿ  ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಆಲೂರು ರಾಮಣ್ಣ, ಚಂದ್ರಾ ಲೇ ಔಟ್ ನಾಗರೀಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸಿ.ಜಿ.ಗೌಡ ಸೇರಿದಂತೆ ಅನೇಕ ಮುಖಂಡರು, ವಾರ್ಡ್ ನಿವಾಸಿಗಳು ಉಪಸ್ಥಿತರಿದ್ಧರು.

About The Author

Leave a Reply

Your email address will not be published. Required fields are marked *