

ಹಿರಿಯೂರು:
ಸಮಾಜದಲ್ಲಿ ಯುವಕರು ಕುಡಿತಕ್ಕೆ ದಾಸರಾಗಿ ಕುಟುಂಬ ನಿರ್ವಹಣೆ ಮಾಡದೇ ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಹಾಳು ಮಾಡಿ, ಕುಟುಂಬವನ್ನು ಬೀದಿಪಾಲು ಮಾಡುತ್ತಿದ್ದು, ಇಂತಹ ಯುವಜನತೆಯನ್ನು ಮಧ್ಯಪಾನದಿಂದ ಮುಕ್ತಗೊಳಿಸಿ ಅವರನ್ನು ಸರಿದಾರಿಗೆ ತಂದು ಜಾಗೃತಿಗೊಳಿಸುವ ಕಾರ್ಯವನ್ನು ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಡಲಾಗುತ್ತಿದೆ ಎಂಬುದಾಗಿ ರೈನ್ ಟ್ರಸ್ಟ್ ನ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಅವರು ಹೇಳಿದರು.
ನಗರದ ವೇದಾವತಿ ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 1985 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಬ್ಬ ಡ್ರೈವರ್, ಒಬ್ಬಮೆಕಾನಿಕ್, ಒಬ್ಬ ಆಪರೇಟರ್, ಒಬ್ಬ ಕಟ್ಟಡ ನಿರ್ಮಾಣ ಕಾರ್ಮಿಕ, ಒಬ್ಬ ಟೈಲರ್ ಇನ್ನು ಇತರ 10 ಹಲವಾರು ಶ್ರಮಿಕ ಕೆಲಸಗಳನ್ನು ಮಾಡುವ ವ್ಯಕ್ತಿ ಮದ್ಯಪಾನದಿಂದ ಮರಣ ಹೊಂದಿದರೆ ಅವನ ಸ್ಥಾನಕ್ಕೆ ಇನ್ನೊಬ್ಬ ವ್ಯಕ್ತಿ ಬರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಶ್ರಮಿಕ ವರ್ಗದವರು ದುಷ್ಚಟಗಳಿಗೆ ಬಲಿಯಾಗದೇ ಕುಡಿತವನ್ನು ತ್ಯಜಿಸಿ, ಸಮಾಜದ ಮುಖ್ಯ ವಾಹಿನಿಗೆ ಬರುವ ಮೂಲಕ ನಿಮ್ಮ ಕುಟುಂಬಕ್ಕೆ ಆಧಾರವಾಗಬೇಕು ಎಂಬುದಾಗಿ ಹೇಳಿದರು.

ಕುಡಿತದಿಂದಾಗಿ ದುಡಿದ ಹಣ ಹಾಳಾಗುವುದರ ಜೊತೆಗೆ ನಿಮ್ಮ ಆರೋಗ್ಯವೂ ಸಹ ಹಾಳಾಗುತ್ತದೆ, ಮಧ್ಯಪಾನ, ಧೂಮಪಾನ, ಹಾಗೂ ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿದ್ದು,ಇಂತಹ ರೋಗಗಳಿಂದ ದೂರವಿರಬೇಕಾದರೆ ಕುಡಿತದಿಂದ ದೂರವಿರುವುದು ಅನಿವಾರ್ಯವಾಗಿದೆ ಎಂಬುದಾಗಿ ಹೇಳಿದರು.
ಕುಡಿತದಿಂದಾಗಿ ಸುಮಾಜ ಹಾಗೂ ಕುಟುಂಬದಿಂದ ನೀವು ತಿರಸ್ಕೃತರಾಗುತ್ತೀರಾ, ಕುಡುಕ ಎಂದು ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು, ಮಕ್ಕಳನ್ನು, ಅವಮಾನಿಸುತ್ತಾರೆ. ಆದ್ದರಿಂದ ಇದರಿಂದ ಹೊರಬರಬೇಕು. ಬನ್ನಿ ನೀವು ಒಂಟಿಯಲ್ಲ ನಿಮ್ಮೊಂದಿಗೆ ಕುಟುಂಬವಿದೆ, ಸ್ನೇಹಿತರಿದ್ದಾರೆ, ಸಮಾಜವಿದೆ, ದೇಶವಿದೆ ಎಂಬುದಾಗಿ ಹೇಳಿದರು.
ಈ ಸಭೆಯ ಅಧ್ಯಕ್ಷತೆಯನ್ನು ಶಂಕರ್ ಭಾಗವತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಲತಾರವೀಂದ್ರಪ್ಪ, ನಟರಾಜ್ ಬಾದಾಮಿ, ಅಶೋಕ ಪಿಟ್ಲಾಲ್ಲಿ ,ಪೊಲೀಸ್ ಭೇಟೆ ಪ್ರಸನ್ನ, ಬಬ್ಬೂರುರವಿ, ಕಿರಣ್ ಜೈನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಸುಮಾರು 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.