

ಹಿರಿಯೂರು:
ದಸರಾ ಹಬ್ಬದ ಪ್ರಯುಕ್ತ ಹೆಣ್ಣು ಮಕ್ಕಳು ಬೆಳಗಿನ ಜಾವ ಬನ್ನಿಮರ ಪೂಜೆ ಹಾಗೂ ದೇವಸ್ಥಾನಗಳಿಗೆ ಪೂಜೆಗಳಿಗೆ ಹೋಗುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು, ಈ ನಿಟ್ಟಿನಲ್ಲಿ ಹಲವಾರು ಸೂಕ್ತ ಸುರಕ್ಷಿತ ಕ್ರಮಗಳನ್ನು ಅನುಸರಿಸುವಂತೆ ಸಾಮಾಜಿಕಕಾರ್ಯಕರ್ತ ಗುಜ್ಜಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಹೆಣ್ಣು ಮಕ್ಕಳು ಪೂಜೆ ಮಾಡಲು ತೆರಳುವಾಗ ಸಡಗರ-ಸಂಭ್ರಮದಲ್ಲಿ ಬಂಗಾರದ ಆಭರಣಗಳನ್ನು ಧರಿಸದೆ, ಪರ್ಯಾಯವಾಗಿ ನಕಲಿ ಆಭರಣಗಳನ್ನು ಧರಿಸಬೇಕು, ಬೆಳಗಿನ ಜಾವ ದೇವಸ್ಥಾನಕ್ಕೆ ಹೋಗುವಾಗ ಅಕ್ಕ-ಪಕ್ಕದ ಮನೆಯವರ ಜೊತೆ ಒಟ್ಟಾಗಿ ಹೋಗಿ ಕನಿಷ್ಠ ನಾಲ್ಕಕ್ಕಿಂತ ಹೆಚ್ಚು ಜನರು ಗುಂಪಾಗಿ ತೆರಳಿ, ಪೂಜೆ ಸಲ್ಲಿಸಿ ಬರಬೇಕು.

ಜೊತೆಗೆ ನೀವು ರಸ್ತೆಯಲ್ಲಿ ಹೋಗುವಾಗ ಹೆಚ್ಚಿನ ಬೆಳಕಿನ ವ್ಯವಸ್ಥೆ ಇರುವ ರಸ್ತೆಗಳಲ್ಲಿ ಮಾತ್ರ ಸಂಚರಿಸಬೇಕು, ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ನಿಮ್ಮ ಹಿಂದೆ-ಮುಂದೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರೆ, ಕೂಡಲೇ ನೀವು ಹತ್ತಿರದ ಪೊಲೀಸರಿಗೆ ಅಥವಾ 112 ಗೆ ಕರೆ ಮಾಡಿ ತಿಳಿಸಬೇಕು ಎಂಬುದಾಗಿ ಸೂಚನೆ ನೀಡಿದ್ದಾರೆ.