

ಹಿರಿಯೂರು:
ನಗರದ ನೆಹರು ಮೈದಾನದಲ್ಲಿ ಶ್ರೀಶಕ್ತಿಗಣಪತಿ ಪೂಜಾ ಸಮಿತಿ ಮತ್ತು ನಗರಸಭೆ ವತಿಯಿಂದ ಪ್ರತಿಷ್ಟಾಪಿಸಲಾಗಿದ್ದ 54ನೇ ವರ್ಷದ ಸಾರ್ವಜನಿಕ ಶಕ್ತಿಣಪತಿಯ ವಿಸರ್ಜನೆ ಅಂಗವಾಗಿ ಭಾನುವಾರ ಬೃಹತ್ ಶೋಭಾಯಾತ್ರೆ ನಡೆಯಿತು.
ಗಣೇಶೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ನೇತೃತ್ವದಲ್ಲಿ ಕಳೆದ 30 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.

ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಾವಿರಾರು ಜನರು ಈ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಸುಮಾರು 13 ವಿವಿಧ ರೀತಿಯ ಜಾನಪದ ಕಲಾತಂಡಗಳು ಸೇರಿದಂತೆ ಮೆರವಣಿಗೆಯಲ್ಲಿ ಅದ್ದೂರಿ ಡಿ.ಜೆ.ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ನಗರದ ಯುವಕ-ಯುವತಿಯರು ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು ನಗರಸಭೆ ಸದಸ್ಯೆಯರು ಕಲಾತಂಡಗಳ ವಾದ್ಯಕ್ಕೆ ಹಾಗೂ ಡಿಜೆ ಸದ್ಧಿಗೆ ಕುಣಿದು ಕುಪ್ಪಳಿಸಿದರು. ಆರಂಭದಲ್ಲಿ ಕ್ಷೇತ್ರದ ಸಚಿವರಾದ ಡಿ.ಸುಧಾಕರ್ ಅವರು ಶಕ್ತಿಗಣಪತಿ ವಿಶೇಷಪೂಜೆ ಸಲ್ಲಿಸಿ ಶೋಭಯಾತ್ರೆಗೆ ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಯ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು. ಅಂಗಡಿಗಳ ಮುಂದೆ ಶೋಭಾಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರಿಗೆ ಉಚಿತ ಎಳನೀರು, ಬಾಳೆಹಣ್ಣು, ಉಚಿತ ಉಪಾಹಾರ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಶೋಭಾಯಾತ್ರೆ ನೆಹರು ವೃತ್ತ, ಗಾಂಧಿ ವೃತ್ತ, ಆಸ್ಪತ್ರೆ ವೃತ್ತ , ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ರಸ್ತೆ, ಚರ್ಚ್ ರಸ್ತೆ, ಹುಳಿಯಾರು ರಸ್ತೆ, ಬೆಂಗಳೂರು ರಸ್ತೆ ಮೂಲಕ ರಸ್ತೆಯ ಮರಡಿ ರಂಗಪ್ಪನವರ ತೋಟದ ಬಾವಿಯವರೆಗೂ ಸಾಗಿತು. ಅಲ್ಲಿ ಶಕ್ತಿಗಣಪತಿಯನ್ನು ವಿಶೇಷ ಪೂಜೆಯೊಂದಿಗೆ ವಿಸರ್ಜನೆ ಮಾಡಲಾಯಿತು. ಶೋಭಾಯಾತ್ರೆ ಅಂಗವಾಗಿ ಪೊಲೀಸ್ ಇಲಾಖೆ ರಸ್ತೆಯುದ್ದಕ್ಕೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.