

ಹಿರಿಯೂರು:
ನಗರದ ನೆಹರು ಮೈದಾನದಲ್ಲಿ ಪ್ರತಿಷ್ಟಾಪಿಸಿರುವ ಶಕ್ತಿಗಣಪತಿಯನ್ನು ಸೆಪ್ಟಂಬರ್ 28ರಂದು ಅದ್ದೂರಿ ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜಿಸಲಾಗುವುದು ಎಂಬುದಾಗಿ ಎಂಬುದಾಗಿ ಪೂಜಾ ಸಮಿತಿ ಅಧ್ಯಕ್ಷರಾದ ಖಾದಿರಮೇಶ್ ಅವರು ಹೇಳಿದರು.
ನಗರದ ನೆಹರು ಮೈದಾನದಲ್ಲಿರುವ ಶಕ್ತಿಗಣಪತಿ ಸಭಾಂಗಣದಲ್ಲಿ “ಶಕ್ತಿಗಣಪತಿ ವಿಸರ್ಜನೆ” ಕುರಿತಂತೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಗರದಲ್ಲಿ ಶಕ್ತಿಗಣಪತಿಯ ವಿಸರ್ಜನಾ ಮೆರವಣಿಗೆ ಬೆಳಗ್ಗೆ 11.30ಕ್ಕೆ ಆರಂಭವಾಗಲಿದ್ದು, ಗಾಂಧಿ ವೃತ್ತದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ನಗರದ ಹೊರವಲಯದ ಮರಡಿ ರಂಗಜ್ಜನ ತೋಟದ ಬಾವಿಯಲ್ಲಿ ಶಕ್ತಿಗಣಪತಿಯನ್ನು ವಿಸರ್ಜನೆ ಮಾಡಲಾಗುವುದು ಎಂದರಲ್ಲದೆ,
ಮೂರು ಡಿ.ಜೆ. ಹಾಗೂ ಉರುಮೆ, ತಮಟೆವಾದ್ಯ, ಗೊಂಬೆಕುಣಿತ ವೀರಗಾಸೆ, ಡೊಳ್ಳುಕುಣಿತ, ಒಳಗೊಂಡಂತೆ 13 ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ. ಈ ಮೆರವಣಿಗೆಯಲ್ಲಿ ಸುಮಾರು 10ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಗಿರೀಶ ಶಿಕ್ಷಣ ಸಂಸ್ಥೆ ಆವರಣದಲ್ಲಿ ಲಘು ಉಪಹಾರ, ವಿಸರ್ಜನಾ ಸ್ಥಳದಲ್ಲೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ಅವರು ಹೇಳಿದರು.

ಈ 54ನೇ ವರ್ಷದ ಶಕ್ತಿಗಣಪತಿ ಉತ್ಸವದಲ್ಲಿ ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಜಾನಪದಗೀತೆ, ಹರಿಕಥೆ, ಶಾಸ್ತ್ರೀಯನೃತ್ಯ, ಆಧುನಿಕ ನೃತ್ಯ, ಆರ್ಕೆಸ್ಟ್ರಾ, ಬಯಲಾಟ ಸೇರಿ ಹಲವು ಹಿರಿಯ, ಕಿರಿಯ ಕಲಾವಿದರ ಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತ್ತು. ಹಿಂದೂಗಳ ಜತೆ ಮುಸ್ಲಿಂ, ಕ್ರೈಸ್ತ ಒಳಗೊಂಡ ಸರ್ವಧರ್ಮೀಯರು ಪೂಜೆಯಲ್ಲಿ ಪಾಲ್ಗೊಂಡಿದ್ದು, ಈಬಾರಿಯ ವಿಶೇಷವಾಗಿತ್ತು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಪೂಜಾ ಸಮಿತಿ ಗೌರವಾಧ್ಯಕ್ಷ ಈ. ಮಂಜುನಾಥ್, ಜಗದೀಶ್, ಕಬ್ಬಡಿ ರವಿ, ವಿಠ್ಠಲ್, ಶಿವಕುಮಾರ್, ಶಿವಣ್ಣ, ಸುರೇಶ್, ರಮೇಶ್ ಬಾಬು, ಜ್ಞಾನೇಶ್, ಅಣ್ಣಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.