
ಹಿರಿಯೂರು :
ನಗರದ ತೇರುಬೀದಿಯಲ್ಲಿರುವ ಶ್ರೀಖಾಧ್ರಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ನೂತನ ಪಂಚಲೋಹ ವಿಗ್ರಹ ಪ್ರತಿಷ್ಠಾಪನೆ ಹಾಗೂ ಶ್ರೀಖಾಧ್ರಿ ಲಕ್ಷ್ಮೀನರಸಿಂಹಸ್ವಾಮಿ ಜಯಂತಿ ಪೂಜಾ ಕಾರ್ಯಕ್ರಮವನ್ನು ಎಪ್ರಿಲ್ 29ರ ಬುಧವಾರ ಹಾಗೂ ಎಪ್ರಿಲ್ 30ರ ಗುರುವಾರದಂದು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಎಪ್ರಿಲ್ 29ರ ಬುಧವಾರದಂದು ಬೆಳಗ್ಗೆ 5-30 ಗಂಟೆಗೆ ಸ್ವಾಮಿಯನ್ನು ಕುನುಕಲುಗುಂಡಿಗೆ ಕರೆದೊಯ್ದು ಗಂಗಾಪೂಜೆ, ವಿಶೇಷ ಮಹಾಮಂಗಳಾರತಿ, ಸಂಜೆ 7 ಗಂಟೆಗೆ ದೇವಸ್ಥಾನದಲ್ಲಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಹೋಮ, ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ನಡೆಸಲಾಗುವುದು.
ಎಪ್ರಿಲ್ 30ರ ಗುರುವಾರದಂದು ಬೆಳಗ್ಗೆ 5-30 ಗಂಟೆಗೆ ದೇವಸ್ಥಾನದಲ್ಲಿ ಶ್ರೀಸ್ವಾಮಿಯ ನೂತನ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ನಂತರ ವಿಗ್ರಹ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಮದ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ, ಸಂಜೆ 5.30ರಿಂದ ಪ್ರಮುಖ ಬೀದಿಗಳಲ್ಲಿ ಶ್ರೀಸ್ವಾಮಿಯ ನೂತನ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ಈ ಕಾರ್ಯಕ್ರಮಗಳಿಗೆ ಸಮಸ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀಲಕ್ಷ್ಮೀ ನರಸಿಂಹಸ್ವಾಮಿಯ ಕೃಪೆಗೆ ಪಾತ್ರರಾಗಿ, ತಮ್ಮ ತನು,ಮನ,ಧನ ಸಹಾಯ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮನವಿ ಮಾಡಲಾಗಿದೆ.
