April 11, 2026
003

ಹಿರಿಯೂರು :

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ಮೂರು ನಾಲ್ಕು ವರ್ಷವಾದರೂ ಅವುಗಳನ್ನು ರಿಪೇರಿ ಮಾಡದೆ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಕೊಡಲು ವಿಫಲವಾಗಿರುವ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮತ್ತು ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬುದಾಗಿ ರೈತಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.

ತಾಲೂಕು ಪಂಚಾಯತ್ ಮುಂಭಾಗದಲ್ಲಿ ಜಲ ಜೀವನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಒತ್ತಾಯಿಸಿ, ತಾಲೂಕು ಪಂಚಾಯಿತಿ ಕಾರ್ಯನಿರ್ವನಾಧಿಕಾರಿಗಳಾದ ಪ್ರಮೋದ್ ರವರಿಗೆ ಮನವಿಪತ್ರವನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.

ಜಲ ಜೀವನ್ ಯೋಜನೆ ಅಡಿಯಲ್ಲಿ ಅನೇಕ ಗ್ರಾಮಗಳಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ, ಆದ್ದರಿಂದ ಪ್ರತಿ ಗ್ರಾಮದಲ್ಲೂ ರೈತರ ಸಮ್ಮುಖದಲ್ಲಿ ಕಾಮಗಾರಿ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವನಾಧಿಕಾರಿ ಪ್ರಮೋದ್ ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿ, ಇನ್ನು ಎರಡು ಮೂರು ದಿನದ ಒಳಗಾಗಿ ತಾಲೂಕಿನ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತೇವೆ ಮತ್ತು ಎಲ್ಲಾ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿ ಶುದ್ಧ ನೀರು ಕೊಡಲು ಮುಂದಾಗುತ್ತೇವೆ ಎಂಬುದಾಗಿ ಭರವಸೆ ನೀಡಿದರು.

ತಾಲೂಕು ಅಧ್ಯಕ್ಷರಾದ ಬಳಗಟ್ಟೆ ವೆಂಕಟೇಶ್ ರವರು ಮಾತನಾಡಿ, ಇನ್ನು ಒಂದು ವಾರದ ಒಳಗಾಗಿ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿ, ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಕೊಡದಿದ್ದರೆ ಜಿಲ್ಲಾ ಪಂಚಾಯಿತಿ ಮುಂಭಾಗದಲ್ಲಿ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯಲ್ಲಿ ತಾಲ್ಲೂಕು ರೈತಸಂಘದ ಗೌರವಾಧ್ಯಕ್ಷ ಆಲೂರು ಸಿದ್ದರಾಮಣ್ಣ, ರೈತಮುಖಂಡರುಗಳಾದ , ಅರಳೀಕೆರೆ ತಿಪ್ಪೇಸ್ವಾಮಿ, ಸಣ್ಣಪ್ಪ, ಈರಪ್ಪಕನ್ಯಪ್ಪ, ಈರಣ್ಣ, ವೀರಣ್ಣ ಗೌಡ, ಆರ್.ಕೆ.ಗೌಡ, ಹೊಸಕೆರೆ ಜಯಣ್ಣ, ಜಗದೀಶ್, ತಿಮ್ಮಯ್ಯ, ಚಂದ್ರಪ್ಪ, ಹಲೋ ಲಕ್ಕಿ ತಿಮ್ಮಯ್ಯ, ರಾಜಪ್ಪ, ರಾಜಕುಮಾರ್, ಇತರರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *