

ಹಿರಿಯೂರು:
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಆಸೆಗಾಗಿ ಬಿಟ್ಟಿ ಭಾಗ್ಯ ಯೋಜನೆಗಳನ್ನು ನೀಡುವ ಮೂಲಕ, ಸರ್ಕಾರ ಗುಂಡಿಗಳನ್ನು ಮುಚ್ಚಲು ಪರದಾಡುವಷ್ಟು ಆರ್ಥಿಕ ದಿವಾಳಿಯಾಗಿದೆ. ಮಹಿಳೆಯರು ನಮಗೆ ಉಚಿತ ಭಾಗ್ಯಗಳು ಬೇಡ, ರಾಜ್ಯದ ಅಭಿವೃದ್ಧಿ ಪಡಿಸಿ ಎಂದರೂ ಸಹ ಮುಖ್ಯಮಂತ್ರಿಗಳು ಹಠಕ್ಕೆ ಬಿದ್ದವರಂತೆ ಯೋಜನೆಗಳನ್ನು ಮುಂದುವರೆಸುತ್ತಿದ್ದಾರೆ ಎಂಬುದಾಗಿ ಬಿ.ಜೆ.ಪಿ. ಹಿರಿಯ ಮುಖಂಡರಾದ ಎನ್. ಆರ್. ಲಕ್ಷ್ಮಿಕಾಂತ್ ಹೇಳಿದರು.
ತಾಲ್ಲೂಕಿನ ಧರ್ಮಪುರ ಗ್ರಾಮದಲ್ಲಿ ತಾಲ್ಲೂಕು ಬಿ.ಜೆ.ಪಿ. ಘಟಕದ ವತಿಯಿಂದ ಗುಂಡಿ ಮುಚ್ಚುವಂತೆ ಆಗ್ರಹಿಸಿ ಗುಂಡಿಯಲ್ಲಿ ಟೊಮೆಟೊ ಸಸಿ ನೆಟ್ಟು, ಹೋಮ ಸುಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ, ನಂತರ ಅವರು ನಾಡಕಚೇರಿಯ ಉಪತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ರಾಜ್ಯದಲ್ಲಿ ಬಡತನ, ಉದ್ಯೋಗ ತಾಂಡವಾಡುತ್ತಿದೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ ದರ ಕುಸಿತದಿಂದ ಈರುಳ್ಳಿ ಬೆಳೆಗಾರರು ಕೈಕಟ್ಟಿ ಕುಳಿತಿದ್ದು, ಹಾಕಿರುವ ಬಂಡವಾಳ ಸಿಗದೇ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಉದ್ಯೋಗಸ್ಥರಿಗೆ ಸಂಬಳ ನೀಡಲು ಸಹ ಯೋಚಿಸುವ ಸ್ಥಿತಿ ಸರ್ಕಾರಕ್ಕೆ ತಲೆದೂರಿದೆ ಎಂಬುದಾಗಿ ಅವರು ಆರೋಪಿಸಿದರು.
ತಾಲ್ಲೂಕು ಬಿ.ಜೆ.ಪಿ. ಮಂಡಲ ಅಧ್ಯಕ್ಷರಾದ ಕೆ.ಅಭಿನಂದನ್ ಅವರು ಮಾತನಾಡಿ ತಾಲ್ಲೂಕಿನಲ್ಲಿ ಯಾವುದೇ ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕೆಂದರೆ ಯೋಚಿಸಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮುಖ್ಯರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದು, ಅದೆಷ್ಟೋ ಪ್ರಯಾಣಿಕರು ಬಿದ್ದು ಅನಾಹುತ ಅಪಘಾತಗಳು ಸಂಭವಿಸಿವೆ. ಎಂದರಲ್ಲದೆ,
ಗುಂಡಿ ಮುಚ್ಚಲು ಒಂದಿಡೀ ಮಣ್ಣು ಸಹ ಇವರಿಗೆ ಸಿಗದ ಪರಿಸ್ಥಿತಿ ಉದ್ಭವಿಸಿದೆ. ಗುಂಡಿಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ ಆದರೂ ಸಹ ಸರ್ಕಾರ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದ್ದು, ಆಡಳಿತ ಸರ್ಕಾರಕ್ಕೆ ಏನಾದರೂ ಮಾನ ಮರ್ಯಾದೆ ಇದ್ದರೆ ಈ ಕೂಡಲೇ ಈ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ನುಕೂಲ ಮಾಡಿಕೊಡಬೇಕು ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಡಿ.ಎಂ.ಎಫ್. ಅನುದಾನವಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಸ್ತೆ ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿ ಇಲ್ಲದಂತಾಗಿದೆ. ತಾಲ್ಲೂಕಿಗೆ ಡಿ.ಎಂ.ಎಫ್. ಯೋಜನೆಯಿಂದ 8 ಕೋಟಿ ಅನುದಾನ ಬಂದಿದ್ದು, ಈ ಹಣವನ್ನು ರಸ್ತೆಗೆ ಬಳಸಿದರೆ ಲಾಭ ಇರುವುದಿಲ್ಲವೆಂದು ಈ ಹಣವನ್ನು ಹೈಮಾಸ್ಟ್ ದೀಪ ಅಳವಡಿಕೆಗೆ ಬಳಸಿದ್ದಾರೆ, ಇದು ಕಾಂಗ್ರೆಸ್ ಸರ್ಕಾರದ ಹಣ ಒಡೆಯುವ ವಿಧಾನ ಎಂದು ಆರೋಪಿಸಿದರು.

ಜೆ.ಡಿ.ಎಸ್. ಮುಖಂಡರಾದ ಶಿವಣ್ಣ ಮಾತನಾಡಿ, ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ತಾಲೂಕಿನ ಪ್ರತಿಯೊಂದು ರಸ್ತೆಗಳನ್ನ ದುರಸ್ತಿ ಮಾಡಬೇಕು. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ರಸ್ತೆ ಸಮಸ್ಯೆಯನ್ನ ಅರಿತು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಅವರು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಧರ್ಮಪುರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶನೇಶ್ವರ ದೇವಸ್ಥಾನವರೆಗೆ ಜಾಥಾ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಾಜಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ ವಿಶ್ವನಾಥ್, ಜೆ.ಬಿ.ರಾಜು, ಅರಳ್ಳಿಕೆರೆತಿಪ್ಪೇಸ್ವಾಮಿ, ಶಿವಮೂರ್ತಿ, ನಾಗರಾಜ್, ಈರಣ್ಣ, ಸೋಮಣ್ಣ, ಗೋವಿಂದಪ್ಪ, ಬಸವರಾಜ್, ಗಿರೀಶ್, ಯಲ್ಲಪ್ಪ, ಮಂಜಣ್ಣ, ದೇವರಾಜ್, ರಂಗಸ್ವಾಮಿ, ರವಿ, ನಿತಿನ್ ಗೌಡ, ಮೋಹನ್, ಮಲ್ಲಣ್ಣ, ಯೋಗೇಶ್, ರಘು, ತಿಮ್ಮರಾಜ್ ಯಾದವ್ , ಗುರುಮೂರ್ತಿ, ರವಿಶಂಕರ, ಗುರುಲಿಂಗಪ್ಪ, ದ್ಯಾಮಣ್ಣ, ಮಹೇಶ್ , ಶಿವು, ರಾಕೇಶ್ ಸೇರಿದಂತೆ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಕಾರ್ಯಕರ್ತರು ಉಪಸ್ಥಿತರಿದ್ದರು.