
ಹಿರಿಯೂರು :
ನಗರದ ರೋಟರಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ವಾರದ ಏಳು ದಿವಸವು ದಾನಿಗಳ ನೆರವಿನೊಂದಿಗೆ ಪ್ರತಿದಿನ ಮಧ್ಯಾಹ್ನ 12:30 ರಿಂದ 1.30ರವರೆಗೂ ಉಚಿತ ಆಹಾರ ವಿತರಣೆ ಮಾಡಲಾಗುತ್ತಿದ್ದು, ಸುಮಾರು 250 ರಿಂದ 300 ಜನ ಇದರಿಂದ ತೃಪ್ತಿದಾಯಕ ಆಹಾರವನ್ನು ಸೇವಿಸುತ್ತಾರೆ ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ರೋಟರಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಅವರ ಸಂಬಂಧಿಗಳಿಗೆ ಉಚಿತ ಆಹಾರ ವಿತರಿಸಿ, ನಂತರ ಅವರು ಮಾತನಾಡಿದರು.
ಹಲವಾರು ವರ್ಷಗಳಿಂದ ಈ ಉಚಿತ ಆಹಾರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಿಂದ ಆಸ್ಪತ್ರೆಗೆ ಬರುವ ನೂರಾರು ರೋಗಿಗಳು ಹಾಗೂ ಅವರ ಸಂಬಂಧಿಗಳಿಗೆ ಅನುಕೂಲವಾಗಿದ್ದು, ಈ ಕಾರ್ಯಕ್ಕೆ ಹಿರಿಯೂರಿನ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಆಹಾರದಾನಿಗಳಾದ ಎಸ್.ಎಲ್.ಎನ್.ಎಸ್.ವೆಂಕಟೇಶ್. ಚಂದ್ರಕೀರ್ತಿಗುಜ್ಜಾರ್. ಜನ ಔಷಧಿ ರವಿ ಮತ್ತು ಚಂದ್ರಹಾಸ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
