
ಹಿರಿಯೂರು :
ತಾಲೂಕಿನ ತುಳಸಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 29ರಂದು ಆಯೋಜಿಸಲಾಗಿದ್ದ ಜೀಕನ್ನಡ ವಾಹಿನಿಯ ಧಾರವಾಹಿ ಕಾರ್ಯಕ್ರಮವು ಹಿರಿಯ ನಾಗರೀಕರು ಹಾಗೂ ರೈತ ಮುಖಂಡರನ್ನು ಕಡೆಗಡಿಸುವ ಮೂಲಕ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ, ಆಯೋಜಕರ ಬೇಜವಾಬ್ದಾರಿತನವನ್ನು ಖಂಡಿಸಿ ಹಿರಿಯೂರು ನಾಗರೀಕರು, ರೈತಸಂಘ ಹಾಗೂ ರೆಡ್ ಕ್ರಾಸ್ ಸಂಸ್ಥೆಯು ವಾಹಿನಿಯನ್ನು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ.
ಸುಮಾರು 50 ವರ್ಷಗಳ ದಾಂಪತ್ಯ ಪೂರೈಸಿದ ಜೋಡಿಗಳನ್ನು ಗೌರವಿಸುವ ನೆಪದಲ್ಲಿ ಮಧ್ಯಾಹ್ನ 3ಗಂಟೆಗೆ ಆಹ್ವಾನಿಸಲಾಗಿತ್ತು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಸುಂದರ್ ರಾಜ್ ಹಾಗೂ ಅವರ ಪತ್ನಿ ಹಾಗೂ ರೈತ ಸಂಘದ ಗುರು ಗೌರವಾಧ್ಯಕ್ಷರು ಹಾಗೂ ರೆಡ್ ಕ್ರಾಸ್ ನಿರ್ದೇಶಕರಾದ ಆಲೂರುಸಿದ್ದರಾಮಯ್ಯ ಮತ್ತು ಅವರ ಪತ್ನಿಯವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು.
ಆದರೆ ಈ ಕಾರ್ಯಕ್ರಮದಲ್ಲಿ 83 ವರ್ಷ ವಯಸ್ಸಿನ ರೈತಮುಖಂಡ ಆಲೂರುಸಿದ್ದರಾಮಣ್ಣನವರು ಹಾಗೂ ಅವರ ಪತ್ನಿ ಮಧ್ಯಾಹ್ನದಿಂದ ರಾತ್ರಿ 9:30ವರೆಗೆ ವೇದಿಕೆಯ ಮುಂಭಾಗದಲ್ಲಿಯೇ ಕಾದುಕುಳಿತಿದ್ದರೂ, ಅವರನ್ನು ವೇದಿಕೆಗೆ ಕರೆಯದೆ ಕಾರ್ಯಕ್ರಮ ಆಯೋಜಕರು ನಿರ್ಲಕ್ಷ್ಯ ಧೋರಣೆ ತೋರಿ, ಅವಮಾನಿಸಿದ್ದಾರೆ, ಸುಮಾರು ಆರು ಗಂಟೆಗಳ ಕಾಲ ಹಿರಿಯರನ್ನು ಕಾಯಿಸಿ ಕಡೆಗಣಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೆ ಕಾರ್ಯಕ್ರಮದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಎಂಬುದಾಗಿ ರೈತಮುಖಂಡ ಆಲೂರುಸಿದ್ದರಾಮಣ್ಣ ದೂರಿದ್ದಾರಲ್ಲದೆ, ಶೋ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಶೌಚಾಲಯಗಳಿಗೆ ಬೀಗ ಹಾಕಿದ್ದರಿಂದ ಮಕ್ಕಳು ಮಹಿಳೆಯರು ಹಾಗೂ ವೃದ್ಧರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು,
ಕುಡಿಯುವ ನೀರಿನ ಕನಿಷ್ಠ ವ್ಯವಸ್ಥೆಯನ್ನು ಮಾಡದೆ ಸಾರ್ವಜನಿಕರನ್ನು ಜೈಲುವಾಸಿಗಳಂತೆ ನಡೆಸಿಕೊಳ್ಳಲಾಗಿದೆ, ಕೇವಲ ಗಿಮಿಕ್ ಕಾರ್ಯಕ್ರಮದಲ್ಲಿ ಯಾವುದೇ ಮನೋರಂಜನೆ ಅಥವಾ ಸತ್ವ ಇರಲಿಲ್ಲ ಕೇವಲ ಚಪ್ಪಾಳೆ ಮತ್ತು ಕೆಕೆ ಹಾಕಿಸಿಕೊಳ್ಳುವುದಕಷ್ಟೇ ಸೀಮಿತವಾಗಿತ್ತು ಎಂಬುದಾಗಿ ಅವರು ಆರೋಪಿಸಿದ್ದಾರೆ.
ಜೀ ಕನ್ನಡ ವಾಹಿನಿಯವರು ಕೇವಲ ಹಣ ಮಾಡುವ ದಂದೆಗೆ ಇಂತಹ ಗಿಮಿಕ್ ಮಾಡುತ್ತಿದ್ದಾರೆ ಹಿರಿಯ ನಾಗರೀಕರಿಗೆ ಮತ್ತು ರೈತರಿಗೆ ದ್ರೋಹ ಎಸಗುವ ಈ ವಾಹಿನಿಯನ್ನು ನಾವು ಸಂಪೂರ್ಣವಾಗಿ ಬಹಿಷ್ಕರಿಸುತ್ತೇವೆ ಈ ಹಿನ್ನೆಲೆಯಲ್ಲಿ ತಾಲೂಕು ರೈತಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷರಾದ ಆಲೂರುಸಿದ್ದರಾಮಯ್ಯ, ಹಿರಿಯೂರು ನಾಗರೀಕರು, ರೈತಸಂಘ ಹಾಗೂ ರೆಡ್ ಕ್ರಾಸ್ ಸಂಸ್ಥೆಯು ಒಕ್ಕೊರಲಿನಿಂದ ಜೀಟಿವಿ ವಾಹಿನಿಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ನಗರದ ನಾಗರೀಕರು ಯಾವುದೇ ಸಹಕಾರ ನೀಡಬಾರದು ಎಂಬುದಾಗಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
