April 11, 2026
004

ಹಿರಿಯೂರು:

ಮಕ್ಕಳ ಜೀವನ, ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸುವಲ್ಲಿ ತಂದೆ-ತಾಯಿ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿ, ಸನ್ಮಾರ್ಗ ಹಾಗೂ ಉತ್ತಮ ಮೌಲ್ಯಯುತ ಶಿಕ್ಷಣ ನೀಡಿದರೆ ಉತ್ತಮ ನಾಗರೀಕರಾಗಿ ಬೆಳೆಯುತ್ತಾರೆ ಎಂಬುದಾಗಿ ಡಾ. ಬಿ.ಆರ್. ಅಂಬೇಡ್ಕರ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಈ.ಪ್ರಕಾಶ್ ಬಬ್ಬೂರು ಹೇಳಿದರು.

ತಾಲೂಕಿನ ಭೀಮನಬಂಡೆ ಸಮೀಪದ ಯಾಜ್ಞವಲ್ಕ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಗೆ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ-ತಾಯಿಯೇ ಮಕ್ಕಳ ಮೊದಲ ಗುರು. ಅವರಲ್ಲಿ ಪ್ರೀತಿ, ಕಾಳಜಿ, ಶಿಸ್ತು ಮತ್ತು ಮೌಲ್ಯಗಳನ್ನು ಪರಿಚಯಿಸುವುದು ಪೋಷಕರ ಹೊಣೆಗಾರಿಕೆ, ಮಕ್ಕಳಲ್ಲಿ ಒಳ್ಳೆಯ ಅಭ್ಯಾಸ ಬೆಳೆಸುವುದು, ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಬೇಕು ಎಂದರಲ್ಲದೆ,

ಪೋಷಕರ ಹಾಗೂ ಗುರುಗಳ ನಡೆ-ನುಡಿಗಳು ಮಕ್ಕಳಿಗೆ ಮಾದರಿಯಾಗುತ್ತವೆ. ಪದವಿ ಪಡೆಯುವುದೇ ಅಂತಿಮ ಗುರಿಯಲ್ಲ, ಇದು ಹೊಸ ಜೀವನದ ಪ್ರಾರಂಭ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಉತ್ತಮ ಪ್ರಜೆಗಳಾಗಿ  ಹೊರಹೊಮ್ಮಬೇಕಿದೆ ಎಂದರು.

ವಿದ್ಯಾಸಂಸ್ಥೆ ಚೇರ್ಮನ್ ಟಿ. ಸುರೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಆರಂಭವಾಗಿರುವ ನಮ್ಮ ಸಂಸ್ಥೆ ನಿರಂತರವಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶಿಕ್ಷಕರು, ತಂದೆ-ತಾಯಿ ಮತ್ತು ಸಮಾಜ ಮೂರು ಶಕ್ತಿಗಳು ಒಟ್ಟಿಗೆ ಸೇರಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ.

ಅಲ್ಲದೆ ಶಿಕ್ಷಕರು ಮಕ್ಕಳಿಗೆ ವಿದ್ಯೆ ನೀಡುವುದರ ಜೊತೆಗೆ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಪ್ರಮಖ ಪಾತ್ರ ವಹಿಸುತ್ತಾರೆ. ಒಬ್ಬ ಉತ್ತಮ ಶಿಕ್ಷಕ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅದನ್ನು ಉತ್ತೇಜಿಸುವಲ್ಲಿ ಹಾಗೂ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಶಿಲ್ಪಿ ಎಂಬುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ನವೀನ್ ಪ್ರಭು, ಆಡಳಿತಾಧಿಕಾರಿ ಶ್ರೀನಿವಾಸಮೂರ್ತಿ, ಕೋ-ಆರ್ಡಿನೇಟರ್ ಚಿತ್ರಾ, ಶಿಕ್ಷಕಿಯರಾದ ಮೀನಾಕ್ಷಿ, ಗಯಾ ಪ್ರಮೋದ್, ಲೀಲಾವತಿ, ರೋಜಾ ಪ್ರಿಯಾ ಹರ್ಷ, ಸುರೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *