April 11, 2026
002

ಹಿರಿಯೂರು:

ತಾಲೂಕಿನ ಐಮಂಗಲ ಹೋಬಳಿಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ವದ್ದಿಕೆರೆ ಗ್ರಾಮದ ಕಾಲಭೈರವೇಶ್ವರನಾದ ಸಿದ್ದೇಶ್ವರಸ್ವಾಮಿಯ ಬ್ರಹ್ಮರಥೋತ್ಸವವು ಸೋಮವಾರ ಅತ್ಯಂತ ವಿಜೃಂಭಣೆಯಿಂದ ನೆರೆವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಜೈಕಾರಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಿದ್ದೇಶ್ವರಸ್ವಾಮಿಗೆ ಅಭಿಷೇಕ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು, ರಥಕ್ಕೆ ನಾಲ್ಕು ದಿಕ್ಕುಗಳಲ್ಲಿ ಬಾವುಟಗಳನ್ನು ಕಟ್ಟಿ, ಕಳಸ ಸ್ಥಾಪಿಸಿ, ಭಕ್ತರು ಅರ್ಪಿಸಿದ ಬೃಹತ್ ಹೂವಿನಹಾರಗಳಿಂದ ಅಲಂಕರಿಸಲಾಗಿತ್ತು.

ಬಿರುಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ರಥೋತ್ಸವ ವೇಳೆ ಕಂಡುಬಂದ ಮೋಡ ಕವಿದ ವಾತಾವರಣ ನೆಮ್ಮದಿ ನೀಡಿತು. ರಥ ಎಳೆಯುವ ಸಂದರ್ಭದಲ್ಲಿ ಲಘು ಮಳೆಯಾಗಿ ವರುಣನ ಸಿಂಚನವಾದದ್ದು ಭಕ್ತರಲ್ಲಿ ಸಂತಸ ಮೂಡಿಸಿತು. ನೆರೆದಿದ್ದ ಭಕ್ತಾದಿಗಳಿಗೆ ಮಜ್ಜಿಗೆ, ತಂಪು ಪಾನೀಯ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.

ಪ್ರಸಿದ‍್ಧ ಪುಣ್ಯಕ್ಷೇತ್ರವಾದ ವದ್ಧೀಕೆರೆ ಗ್ರಾಮದ ಶ್ರೀಸಿದ್ದೇಶ್ವರಸ್ವಾಮಿ  ದೇವರ ಬ್ರಹ್ಮ ರಥೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿದವು. ರಥೋತ್ಸವದ ಪ್ರಯುಕ್ತ ಮುಂಜಾನೆಯೇ ದೇವರಿಗೆ ವಿಶೇಷ ಅರ್ಚನೆ ಹಾಗೂ ಅಭಿಷೇಕಗಳನ್ನು ನೆರವೇರಿಸಲಾಯಿತು.

ಕ್ಷೇತ್ರದ ಅರ್ಚಕರು ಶಾಸ್ತ್ರೋಕ್ತವಾಗಿ ಮಂತ್ರಘೋಷಗಳೊಂದಿಗೆ ಸ್ವಾಮಿಗೆ ವಿವಿಧ ತೈಲ ಮತ್ತು ಪಂಚಾಮೃತ ಅಭೀಷೇಕಗಳನ್ನು ಮಾಡಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.ಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆಗಳು. ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ಕಳೆ ಮನೆಮಾಡಿದ್ದು, ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಜೈಕಾರ ಹಾಕುತ್ತಾ ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿದ್ದಾರೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿರಿಯೂರು ತಹಶೀಲ್ದಾರ್ ಎಂ.ಸಿದ್ದೇಶ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ತೀರಿಸಿದರು. ಬೆಂಡು-ಬತ್ತಾಸು, ಆಟಿಕೆ ಹಾಗೂ ಬಳೆ ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು.

About The Author

Leave a Reply

Your email address will not be published. Required fields are marked *