
ಹಿರಿಯೂರು:
ಸ್ಥಳೀಯ ಕೆ.ಎಸ್.ಆರ್.ಟಿ.ಸಿ ಘಟಕದ ಕೆಲವು ನಿರ್ವಾಹಕರು ಮತ್ತು ಚಾಲಕರು ತಮ್ಮ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದು, ಮೈಗಳ್ಳತನ ಪ್ರದರ್ಶಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಇಂದು ಬೆಳಿಗ್ಗೆ ಯಲ್ಲದಕೆರೆ ಮತ್ತು ದಸುಡಿ ಮಾರ್ಗವಾಗಿ ಹಿರಿಯೂರು ನಗರಕ್ಕೆ ಬರಬೇಕಿದ್ದ ಬಸ್ಗಳು ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ರದ್ದಾಗಿದ್ದು, ಈ ಭಾಗದ ಪ್ರಯಾಣಿಕರು ಮತ್ತು ಸಾರ್ವಜನಿಕರು ತೀವ್ರ ಪರದಾಡುವಂತಾಯಿತು.
ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಇದ್ದು , ಹಿರಿಯೂರು ತಾಲ್ಲೂಕಿನ ದಸುಡಿ ಮತ್ತು ಯಲ್ಲಾಡಕೆರೆ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಬೆಳಿಗ್ಗೆಯೇ ಬಸ್ ಗಾಗಿ ಕಾಯುತ್ತಿದ್ದರು. ಆದರೆ, ನಿಗದಿತ ಸಮಯಕ್ಕೆ ಬರಬೇಕಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಏಕಾಏಕಿ ಬಾರದಿರುವುದು ಪೋಷಕರ ಮತ್ತು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಿಬ್ಬಂದಿಗಳು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವುದು ಮತ್ತು ನಿಗದಿತ ಸಮಯಕ್ಕೆ ಬಸ್ ಗಳನ್ನು ಕಾರ್ಯಾಚರಣೆ ಮಾಡದೆ ಇರುವುದು, ಈ ಭಾಗದಲ್ಲಿ ಪದ್ಧತಿಯಾಗಿ ಬೆಳೆಯುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗಂಭೀರ ವಿಷಯದ ಕುರಿತು ‘ಪವರ್ ಫೋಕಸ್ ನ್ಯೂಸ್’ ಹಿರಿಯೂರು ಘಟಕ ವ್ಯವಸ್ಥಾಪಕರಾದ ಸಿದ್ದೇಶ್ ಸಿದ್ದನಮಠ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ, ಅವರು ತಮ್ಮ ಸಿಬ್ಬಂದಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
”ಕೆಲವು ಸಿಬ್ಬಂದಿಗಳು ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸದೆ ಕಾಟಾಚಾರಕ್ಕೆ ಕೆಲಸ ಮಾಡುತ್ತಿರುವುದು ಮತ್ತು ಅನಗತ್ಯವಾಗಿ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸಾರ್ವಜನಿಕ ಸೇವೆಗೆ ಅಡ್ಡಿಪಡಿಸುವ ಇಂತಹ ಮೈಗಳ್ಳ ಸಿಬ್ಬಂದಿಗಳ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು. ಅಷ್ಟೇ ಅಲ್ಲದೆ, ಅಂತಹವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ,” ಎಂದು ಸಿದ್ದೇಶ್ ಸಿದ್ದನಮಠ ಅವರು ಎಚ್ಚರಿಕೆ ನೀಡಿದ್ದಾರೆ.
