
ಹಿರಿಯೂರು ;
ತಾಲ್ಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಗಳಿಕಟ್ಟೆ, ಚಿತ್ರದೇವರಟ್ಟಿ, ಶೇಷಪ್ಪನಳ್ಳಿ, ಹಾಲ್ ಮಾದೇನಹಳ್ಳಿ, ಕೆಕೆ ಹಟ್ಟಿ, ಹರಿಶಿಣಗುಡ್ಡಿ ಗೋಕುಲನಗರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳು ವಿದ್ಯುತ್ ಇಲ್ಲದೆ ಸಂಜೆ 4 ಗಂಟೆಯಿಂದ ಕತ್ತಲಲ್ಲೇ ಕಳೆಯುವಂತಾಗಿದ್ದು, ಗ್ರಾಮೀಣ ಜನರು ಕತ್ತಲಲ್ಲಿ ಪರದಾಡುವಂತಾಗಿದೆ ಎಂಬುದಾಗಿ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಆರ್.ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮಗಳಲ್ಲಿ ಹೇಳುವುದಕ್ಕೆ ನಿರಂತರ ಜ್ಯೋತಿ ವಿದ್ಯುತ್ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ವಿದ್ಯುತ್ ಕೊಡುವಲ್ಲಿ ಮಾತ್ರ ಬೆಸ್ಕಾಂ ಇಲಾಖೆ ಹಾಗೂ ಸಿಬ್ಬಂದಿಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಗ್ರಾಮೀಣ ಜನರಿಗೆ ಸರಿಯಾಗಿ ವಿದ್ಯುತ್ ಕೊಡುವಲ್ಲಿ ವಿಫಲಗೊಂಡಿದ್ದಾರೆ, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರಲ್ಲದೆ,
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ನಿರಂತರ ಜ್ಯೋತಿ ನಿರಂತರವಾಗಿ ಕಣ್ಣುಮುಚ್ಚಿ ಕುಂತಿದೆ ಹಾಗೂ ತೋಟದ ಮನೆಯಗಳಿಗೂ ಆರು ದಿನದಿಂದ ವಿದ್ಯುತ್ ಇಲ್ಲ ಹೆಂಗಸರು, ಮಕ್ಕಳು ಹಾಗೂ ವಯೋವೃದ್ಧರಿಗೆ ಹೊರಗೆ ಓಡಾಡಲು ತುಂಬಾ ಸಮಸ್ಯೆಯಾಗಿದೆ. ಅಲ್ಲದೆ ರಾತ್ರಿಯ ಸಮಯದಲ್ಲಿ ಕಾಡುಪ್ರಾಣಿಗಳ ಹಾವಳಿಯಿದ್ದು, ಈ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದೆ, ಇದು ನಾಗರೀಕ ಪ್ರಪಂಚದ ದುರಂತವೇ ಸರಿ ಎಂಬುದಾಗಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕೂಡಲೇ ಸ್ಥಳೀಯ ಬೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು, ಪರೀಕ್ಷೆ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದರಿಂದ ಫಲಿತಾಂಶದಲ್ಲಿ ಹಿನ್ನೆಡೆ ಆಗುವ ಸಾಧ್ಯತೆ ಹೆಚ್ಚಿದ್ದು, ಇದರ ಸಂಪೂರ್ಣ ಹೋಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಹೊರಬೇಕಾಗುತ್ತದೆ ಎಂಬುದಾಗಿ ವಿದ್ಯಾರ್ಥಿಗಳ ಪೋಷಕರು ಹೇಳಿದರು.
