March 6, 2026
0001

ಹಿರಿಯೂರು:

ಬಯಲುಸೀಮೆಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ  ಅವರಿಗೆ ಹಿರಿಯೂರು ತಾಲ್ಲೂಕು  ಜೆ.ಡಿ.ಎಸ್. ಮುಖಂಡರು  ಮನವಿ ಸಲ್ಲಿಸಿ ಒತ್ತಾಯಿಸಿದರು.

ನಿವೃತ್ತ ಮುಖ್ಯ ಎಂಜಿನಿಯರ್ ಹಾಗೂ ಜೆ.ಡಿ.ಎಸ್.ಮುಖಂಡರಾದ ಎಂ.ರವೀಂದ್ರಪ್ಪ ಇವರ ನೇತೃತ್ವದಲ್ಲಿ ತಾಲ್ಲೂಕಿನ ರೈತರ ನಿಯೋಗ  ಗುರುವಾರ ಬೆಂಗಳೂರಿನಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ  ಅವರನ್ನು ಭೇಟಿ ಮಾಡಿ ತಾಲ್ಲೂಕಿನ ನಾಲ್ಕು ಸಮಸ್ಯೆಗಳ ಬಗ್ಗೆ ಚರ್ಚಿಸಿ ಶೀಘ್ರ ಪರಿಹಾರ ನೀಡಲು  ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದಾಗಿ  ನಿಯೋಗವು  ಮನವಿ ಮಾಡಿತು.

ತಾಲ್ಲೂಕಿನ ಜೆ.ಜೆ.ಹಳ್ಳಿ ಹೋಬಳಿಯಲ್ಲಿ  ಅಂತರ್ಜಲ ಕುಸಿದು ಹೋಗಿದ್ದು, ಆ ಭಾಗದ ಜನ ಜಾನವಾರುಗಳಿಗೆ  ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ರೈತರು ತೋಟಗಳನ್ನು  ಉಳಿಸಿಕೊಳ್ಳಲು  ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ  ಮಾಡಿಕೊಂಡು ಬೆಳೆಗಳನ್ನು  ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಹಾಗಾಗಿ ಗಾಯಿತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರ ಬಜೆಟ್ ನಲ್ಲಿ 400ಕೋಟಿ ಹಣ ಮೀಸಲಿರಿಸಿ ಕಾಮಗಾರಿ ಬೇಗ ಮುಗಿಸಿದರೆ ಅಲ್ಲಿನ ರೈತರು ಉಳಿಯುತ್ತಾರೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ತುರ್ತಾಗಿ ಹಣ ಬಿಡುಗಡೆ ಮಾಡಿಸುವಂತೆ  ತಾವು ಒತ್ತಾಯಿಸಬೇಕು.

ಬೀದರ್ –ಶ್ರೀರಂಗಪಟ್ಟಣ 150 ಎ ರಸ್ತೆಗೆ ಹೊಂದಿಕೊಂಡಿರುವ ಕಳವಿಭಾಗಿ ಗ್ರಾಮಕ್ಕೆ ಒಳತಿರುವು  ಹಾಗೂ ಅಂಡರ್ ಬ್ರಿಡ್ಜ್ ಸಂಪರ್ಕ ಕಲ್ಪಿಸಬೇಕು. ಅಂಡರ್ ಬ್ರಿಡ್ಜ್ ಇಲ್ಲದ ಕಾರಣ  ಇದುವರೆಗೂ ಸುಮಾರು 5ಜನರು ಪ್ರಾಣ ಕಳೆದುಕೊಂಡಿದ್ದು 30ರಿಂದ 40 ಜನರಿಗೆ   ಕೈ-ಕಾಲು ಮುರಿತ ಸೇರಿದಂತೆ ಗಂಭೀರ ಗಾಯಗಳಾಗಿವೆ.

ಗ್ರಾಮದಲ್ಲಿ ಪ್ರಸಿದ್ಧ ಶ್ರೀಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನವಿದ್ದು, ಪ್ರತಿ ಶನಿವಾರ ಅಮವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ಸುಮಾರು 2ರಿಂದ 3ಸಾವಿರ  ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಶಾಲಾಮಕ್ಕಳು, ರೈತರು ಓಡಾಡಲು ತುಂಬಾ ತೊಂದರೆ ಉಂಟಾಗಿದ್ದು, ಈ ವಿಷಯವನ್ನು ಈಗಾಗಲೇ ಸ್ಥಳೀಯ ತಾಲ್ಲೂಕು ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಶಾಸಕ  ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ  ತರಲಾಗಿದ್ದರೂ ಸಹ  ಯಾವುದೇ ಪ್ರಯೋಜನವಾಗಿಲ್ಲ.

ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ. ಜನರ ಜೀವಭದ್ರತೆ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಕಳವಿಭಾಗಿ  ಗ್ರಾಮಕ್ಕೆ ಸೂಕ್ತ ಒಳತಿರುವು ಹಾಗೂ ಅಂಡರ್ ಬ್ರಿಡ್ಜ್  ವ್ಯವಸ್ಥೆ ಮಾಡಿಕೊಡಬೇಕು.

ತಾಲ್ಲೂಕಿನ ತೋಟಗಾರಿಕಾ ಇಲಾಖೆಯಡಿ ಜಿಲ್ಲೆಯಲ್ಲಿ ಅಡಿಕೆ, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ  ಒಟ್ಟು 4843 ರೈತರು 1156 ಎಕರೆಗೆ  ರೂ.296.03 ಲಕ್ಷಗಳಷ್ಟು  ವಿಮಾಕಂತನ್ನು ನೀಡಿ ನೊಂದಾಯಿಸಿಕೋಂಡಿದ್ದಾರೆ.

ನಿಯೋಗದ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ ಅವರು ತಕ್ಷಣವೇ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ  ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಟ್ರಯಲ್ ರನ್ ಮಾಡುವಾಗ  ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಸೂಚಿಸಿ ರೈತರ ಸಮಸ್ಯೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಈಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚೆ  ಮಾಡುತ್ತೇನೆ ಎಂಬುದಾಗಿ ಅವರು ಹೆಳಿದರು.

ಈ ಸಂದರ್ಭದಲ್ಲಿ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾದ ಕೆ.ಮಂಜುನಾಥ್, ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಹನುಮಂತರಾಯಪ್ಪ, ಲತಾರವೀಂದ್ರಪ್ಪ, ಐಮಂಗಲ ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ತಿಪ್ಪೀರಯ್ಯ, ಉಪಾಧ್ಯಕ್ಷರಾದ ಹೆಚ್.ಜೆ.ಕಾಂತರಾಜ್, ಕಾರ್ಯದರ್ಶಿ ಯಶವಂತರಾಜ್, ವೀರೇಂದ್ರಪಾಟೀಲ್,  ರಂಗನಾಥ್, ಸಣ್ಣೀರಪ್ಪ, ದೇವರಾಜ್, ಮಂಜುನಾಥ್, ಕೇಶವಮೂರ್ತಿ, ವಿ.ರೇಣುಕಾ, ಜಿ.ಗಿರೀಶ್, ವಿರುಪಾಕ್ಷ, ಗೋವಿಂದರಾಜು, ಆನಂದಗೌಡ, ಪೂ.ತಿಮ್ಮಣ್ಣ, ಬೋರನಕುಂಟೆಕರಿಯಣ್ಣ, ಹನುಮಂತಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *