
ತಾಲ್ಲೂಕಿನ ಜವನಗೊಂಡನಹಳ್ಳಿ, ಐಮಂಗಲ, ಕಸಬಾಹೋಬಳಿ ಹಾಗೂ ಧರ್ಮಪುರ ಹೋಬಳಿಯ ಕೆಲವು ಭಾಗಗಳಲ್ಲಿ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಹಳ್ಳಿಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂಬುದಾಗಿ ರೈತ ಸಂಘದ ರಾಜ್ಯ ಘಟಕದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ. ಹೊರಕೇರಪ್ಪಅವರು ಒತ್ತಾಯಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಂಘದ ತಾಲ್ಲೂಕು ಘಟಕದ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಾಣಿವಿಲಾಸಜಲಾಶಯ ವರ್ಷದಲ್ಲಿ ಎರಡು ಬಾರಿ ಕೋಡಿ ಹರಿದಿದ್ದರೂ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ಬೇರೆ ಕಡೆ ಅಂತರ್ಜಲ ವೃದ್ಧಿಸಿಲ್ಲ. ಸಾವಿರ ಅಡಿಯವೆರೆಗೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಜನ-ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸಬೇಕಾಗಿದೆ. ಕುಡಿಯುವ ನೀರು ಪೂರೈಕೆಯನ್ನು ತುರ್ತು ಎಂದು ಭಾವಿಸಿ ಟ್ಯಾಂಕರ್ ನೀರಿಗೆ ತಾಲ್ಲೂಕು ಆಡಳಿತ ಮಾಡಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಸಮಾಪನಗೊಂಡು 22 ವರ್ಷ ಕಳೆದಿದ್ದು, ಅದನ್ನು ಪುನರಾಂಭಿಸಿದರೆ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುತ್ತದೆ. ಜಿಲ್ಲಾಡಳಿತ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂಬುದಾಗಿ ಅವರು ಆಗ್ರಹಿಸಿದರು.

ರೈತಸಂಘ ಯುವ ಘಟಕದ ಅಧ್ಯಕ್ಷರಾದ ಯಳನಾಡುಚೇತನ್ ಅವರು ಮಾತನಾಡಿ ವಾಣಿವಿಲಾಸ ಅಣೆಕಟ್ಟಿಗೆ ಹೆಚ್ಚಿನ ನೀರು ಬರುತ್ತಿರುವ ಕಾರಣ ತಾಲ್ಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಹೊರಗಿನಿಂದ ನಿತ್ಯ ನೂರಾರು ಜನ ಭೂಮಿ ಖರೀದಿಗೆ ಬರುತ್ತಿದ್ಧಾರೆ. ರೈತರು ಯಾವುದೇ ಆಮಿಷಗಳಿಗೆ ಒಳಗಾಗದೆ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷರಾದ ಬ್ಯಾಡರಹಳ್ಳಿಶಿವಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ದಸ್ತಗೀರ್ ಸಾಬ್, ಎಂ.ಆರ್.ಪುಟ್ಟಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
