
ಹಿರಿಯೂರು :
ವೇದಾವತಿ ನದಿಯ ಬಳದಂಡೆಗೆ ಹೊಂದಿಕೊಂಡಿರುವ ಗುಟುಕು ಮಲ್ಲೇಶ್ವರ ದೇಗುಲದ ಬಳಿ ಈಚೆಗೆ ದೇವರ ಪಾದುಕೆಗಳನ್ನು ಕೆತ್ತಲಾದ ದುಂಡಾದ ಶಿಲೆ ಪತ್ತೆಯಾಗಿದ್ದು, ಕ್ರಿ.ಶ.11-12ನೇ ಶತಮಾನಕ್ಕೆ ಸೇರಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಶಿವರಾತ್ರಿಯ ವೇಳೆ ಗುಟುಕು ಮಲ್ಲೇಶ್ವರ ಗುಡಿಯನ್ನು ಸ್ವಚ್ಛಗೊಳಿಸುವಾಗ ಭಾಗ್ಯಮ್ಮ ಎಂಬುವರಿಗೆ ಈ ಪಾದುಕೆ ಸಿಕ್ಕಿದ್ದು, ಗುಟುಕು ಮಲ್ಲೇಶ್ವರ ದೇಗುಲದ ಮುಂದೆ ಈ ಶಿಲೆಯನ್ನು ಸುರಕ್ಷಿತವಾಗಿ ಇಡಲಾಗಿದೆ,
ಈ ಹಿಂದೆ ಹಲವು ಶಿಲಾ ಶಾಸನಗಳನ್ನು ಪತ್ತೆ ಮಾಡಿರುವ ತಾಲೂಕಿನ ಆಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಮಂಜುನಾಥ್ ಚಿಕ್ಕೇರಹಳ್ಳಿ ಮತ್ತಿತರರು ಪಾದುಕೆಗಳನ್ನು ನೋಡಿ ಬಹುಶಃ ಇವು 11-12ನೇ ಶತಮಾನಕ್ಕೆ ಸೇರಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ಅಡಿ ವಿಸ್ತೀರ್ಣದ 10 ಕೆಜಿ ಯಷ್ಟು ಭಾರವಿರುವ ಕಲ್ಲಿನ ಮೇಲೆ ಪಾದಗಳೆರಡರ ನಡುವೆ ದೀಪ ಇರುವಂತೆ ಶಿಲ್ಪ ಕೆತ್ತನೆ ಇದೆ, ಕೆಳಹಂತದ ಕಲ್ಲಿನ ಸುತ್ತಲೂ ಹೂವು ಬಳ್ಳಿಯನ್ನು ಸೊಗಸಾಗಿ ಕೆತ್ತಲಾಗಿದೆ, ಪಾದಗಳ ರಚನೆ ಕಾಲ್ಗೆಜ್ಜೆಯ ಅಲಂಕಾರ ನೋಡಿದರೆ ದೇವತೆಯ ಪಾದಗಳಿರುವಂತಿದೆ.
ಇದೇ ರೀತಿಯ ಶಿಲ್ಪವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರದಲ್ಲಿರುವ ಮಲ್ಲಿಕಾರ್ಜುನ ದೇವಾಲಯದಲ್ಲೂ ಕಾಣಬಹುದಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ. ದೇವಸ್ಥಾನದ ಸಮೀಪ ಇನ್ನು ಅನೇಕ ದೊಡ್ಡ ಶಿವಲಿಂಗಗಳು ಇರಬಹುದು ಶೋಧನೆ ಮಾಡಿದರೆ ಪತ್ತೆ ಆಗುತ್ತವೆ ಎಂಬುದಾಗಿ ದೇಗುಲದ ಅರ್ಚಕ ವೀರೇಶ್ ಹೇಳಿದ್ದಾರೆ.
