
ಹಿರಿಯೂರು :
ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಯುತ್ತಿದ್ದು, ಇದರಿಂದ ಯುವಕರು, ಚಿಕ್ಕವಯಸ್ಸಿನ ಮಕ್ಕಳು ಕುಡಿತಕ್ಕೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದು, ಕೂಲಿನಾಲಿ ಮಾಡಿಕೊಂಡು ದುಡಿದ ಹಣದಲ್ಲಿ ಕುಡಿದು ಮನೆಯಲ್ಲಿ ಹೆಂಡತಿ, ಮಕ್ಕಳು, ತಂದೆ-ತಾಯಿಗಳಿಗೆ ನರಕ ತೋರಿಸುತ್ತಿದ್ದಾರೆ ಎಂಬುದಾಗಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಈ.ಮಂಜುನಾಥ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ದಲಿತಸಂಘರ್ಷ ಸಮಿತಿ(ಪರಿವರ್ತನಾವಾದ) ಜಿಲ್ಲಾ ಸಮಿತಿ ವತಿಯಿಂದ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆಸುತ್ತಿರುವ ಅಕ್ರಮ ಮದ್ಯಮಾರಾಟ ನಿಲ್ಲಿಸುವಂತೆ ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರ್ ಸಿದ್ದೇಶ್ ಅವರಿಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.
ಕುಡಿತದ ಚಟಕ್ಕೆ ಬಲಿಯಾಗಿ ಮಕ್ಕಳ ವಿದ್ಯಾಭ್ಯಾಸವೂ ಕುಂಠಿತವಾಗಿ ಅವರಿಗೆ ಭವಿಷ್ಯವೇ ಇಲ್ಲದಂತಾಗುತ್ತಿದೆ. ರಾತ್ರಿ 11ಗಂಟೆಯಾದರೂ ಮನೆಗಳಿಗೆ ಬರುವುದಿಲ್ಲ. ಅಕ್ರಮ ಮದ್ಯ ಮಾರಾಟಗಾರರಿಗೆ ಹೇಳಲು ಹೋದರೆ ಯಾರಿಗೆ ಹೇಳುತ್ತೀರೋ ಹೇಳಿ, ಕಂಪ್ಲೇಟ್ ಮಾಡಿ ನಾವು ಹೆದರುವುದಿಲ್ಲ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದರಲ್ಲದೆ,

ಈ ಕೂಡಲೇ ತಾವು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಮದ್ಯಮಾರಾಟವನ್ನು ನಿಲ್ಲಿಸಬೇಕು, ಒಂದು ವೇಳೆ ಅಕ್ರಮ ಮದ್ಯ ಮಾರಾಟ ನಿಲ್ಲಿಸದೇ ಹೋದಲ್ಲಿ ಗ್ರಾಮಸ್ಥರೊಂದಿಗೆ ತಮ್ಮ ಕಚೇರಿಯ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂಬುದಾಗಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರುಗಳಾದ ಈ.ಮಂಜುನಾಥ್, ಟಿ.ಮಂಜುನಾಥ್, ಜಿ.ಎ.ರೋಹಿತ್ ಕುಮಾರ್, ಕೆ.ಮೀನಾಕ್ಷಿ, ಡಿ.ಚಂದನ, ಟಿ.ನಾಗೇಶ್ವರಿ, ಆರ್.ಲಕ್ಷ್ಮೀ, ಟಿ.ಗುರುಪ್ರಸಾದ್, ಲಾವಣ್ಯ, ಶಾಂತವೀರಮ್ಮ, ತಿಪ್ಪೇಸ್ವಾಮಿ, ಎಸ್.ಕೆಂಚಪ್ಪ, ಡಿ.ಕಾಂಚನಾ, ಸಿದ್ಧಗಂಗಮ್ಮ, ಆರ್.ಎನ್.ರಘುನಾಥ, ಪಿ.ಲಕ್ಕಮ್ಮ, ಆರ್.ಗಂಗಮ್ಮ, ಬಿ.ನಾಗವೇಣಿ, ಕೆ.ಜಗದೀಶ್, ಎಂ.ಆರ್.ರಂಗನಾಥ, ಕಂಬಣ್ಣ, ಕಿರಣ್, ನಿಖಿಲ್ ಕುಮಾರ್, ಎಸ್.ಇಂದ್ರಮ್ಮ, ಸುಮಿತ್ರಮ್ಮ, ಆರ್.ಶಾರದಮ್ಮ, ಆರ್.ಪಾಂಡುರಂಗಪ್ಪ, ನಾಗರಾಜ, ಆರ್.ಭೂತೇಶ್, ಎನ್.ಕಾವ್ಯ, ಭಾಗ್ಯಮ್ಮ, ಲಕ್ಷ್ಮೀದೇವಿ, ಆರ್.ತಿಮ್ಮರಾಜ, ಎಸ್.ಪವನ್, ಮೂಡ್ಲಿಗೌಡ, ರಂಗಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

