
ಹಿರಿಯೂರು:
ಮಧ್ಯಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ,ಮುಂಬರುವ 2026-27 ನೇ ಸಾಲಿನ ಆಯವ್ಯಯದಲ್ಲಿ 5ಸಾವಿರ ಕೋಟಿ ರೂ ಅನುದಾನ ಮೀಸಲಿಡುವಂತೆ ಹಾಗೂ ಚಿತ್ರದುರ್ಗ ತಾಲ್ಲೂಕು ಗೋನೂರು ಅಕ್ವಾಡೆಕ್ಟ್ ವರೆಗೆ ಭದ್ರಾ ನೀರು ಹರಿಸುವ ಸಲುವಾಗಿ ಬಾಕಿ ಕಾಮಗಾರಿಗಾಗಿ ತುರ್ತಾಗಿ 300ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುವಂತೆ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಭೇಟಿ ವೇಳೆ ಮನವಿ ಮಾಡಿದ್ದಾರೆ.
ಭದ್ರಾಮೇಲ್ದಂಡೆ ಯೋಜನೆಯು ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ 2ಲಕ್ಷ 25 ಸಾವಿರದ 515 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ.ಅಚ್ಚುಕಟ್ಟು ಪ್ರದೇಶದ ಸುಮಾರು 367 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮಾರ್ಥ್ಯದ ಶೇ.50 ರಷ್ಟು ನೀರು ತುಂಬಿಸುವುದು ಮತ್ತು ವಾಣಿವಿಲಾಸ ಸಾಗರ ಜಲಾಶಯಕ್ಕೆ 2.00 ಟಿ.ಎಂ.ಸಿ. ನೀರು ಹರಿಸುವುದು ಯೋಜನೆಯ ಭಾಗವಾಗಿದೆ.ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಮಟ್ಟ ಸುಧಾರಿಸಿ, ಪಾವಗಡ ಮತ್ತು ಶಿರಾ ತಾಲ್ಲೂಕುಗಳಲ್ಲಿ ಕಂಡುಬರುತ್ತಿರುವ ವಿಷಕಾರಿ ಫ್ಲೋರೈಡ್ ಅಂಶ ಕಡಿಮೆಯಾಗಲಿದೆ ಎಂಬುದಾಗಿ ಸಚಿವರು ವಿನಂತಿಸಿದ್ದಾರೆ.
ಭದ್ರಾಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತವು 21,167.93 ಕೋಟಿಗಳಾಗಿದ್ದು, ಇಲ್ಲಿಯವರೆಗೆ ಸುಮಾರು 11,409.55 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇನ್ನು ಸುಮಾರು 10ಸಾವಿರ ಕೋಟಿರೂಗಳ ಅನುದಾನದಅವಶ್ಯಕತೆಯಿದೆ. ಮಧ್ಯ ಕರ್ನಾಟಕದ ರೈತರು ಕಳೆದ 5ದಶಕಗಳಿಂದ ನೀರಾವರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮಳೆಯಅಭಾವದಿಂದಾಗಿ ಕೃಷಿ ಚಟುವಟಿಕೆ ಕುಠಿಂತಗೊಂಡು ಜನರು ಉದ್ಯೋಗಅರಸಿ ವಲಸೆ ಹೋಗುತ್ತಿದ್ದಾರೆ.
ಈ ಯೋಜನೆಯಿಂದ ಕೃಷಿ ಇಳುವರಿ 3ರಿಂದ 4ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇತ್ತೀಚೆಗೆ ಜಿಲ್ಲಾ ವ್ಯಾಪ್ತಿಯ ಮತ್ತು ಎಲ್ಲಾ ತಾಲ್ಲೂಕಿನ ರೈತ ಸಂಘಟನೆಗಳು ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ತಮ್ಮಅಳಲನ್ನು ವ್ಯಕ್ತಪಡಿಸುತ್ತ ಪ್ರತಿಭಟನೆ ಕೈಗೊಳ್ಳುತ್ತಿದ್ದಾರೆ.

ರೈತ ಸಂಘಟನೆ ಪ್ರತಿಭಟನೆ ಮತ್ತು ಜನರಅಳಲನ್ನು ಪರಿಗಣಿಸಿ , ಬರುವ ಬಜೆಟ್ ನಲ್ಲಿ ಆದ್ಯತೆ ಮೇರೆಗೆ 5ಸಾವಿರ ಕೋಟಿ ಹಂಚಿಕೆ ಮಾಡುವಂತೆ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲೆಯ ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರಪಪ್ಪಿ ಅವರು ಮುಖ್ಯಮಮತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಯೋಜನೆಯಡಿಯಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯು ಸುಮಾರು 152 ಕೆರೆಗಳನ್ನು ತುಂಬಿಸಲಿದ್ದು, ಸೂಕ್ಷ್ಮ ನೀರಾವರಿ ವ್ಯವಸ್ಥೆಯಡಿಯಲ್ಲಿ 3.00 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಲಿದೆ. ಅಜ್ಜಂಪುರ ತಾಲ್ಲೂಕಿನಅಬ್ಬಿನಹೊಳೆ ಗ್ರಾಮದ ಭೂ ಸಮಸ್ಯೆಯು ಸುಮಾರು 4 ವರ್ಷಗಳಿಂದ ಬಾಕಿ ಉಳಿದಿತ್ತು.
ಕಳೆದ ಮಾರ್ಚ್ ನಲ್ಲಿ ಉಪಮುಖ್ಯಮಂತ್ರಿಗಳು ಅಬ್ಬಿನಹೊಳೆ ಗ್ರಾಮಕ್ಕೆ ಭೇಟಿ ನೀಡಿ, ವಿದಾನಸೌಧದಲ್ಲಿ ರೈತರೊಂದಿಗೆ ಸಭೆ ನಡೆಸಿದ ನಂತರ ಲೋಕ್ ಅದಾಲತ್ ಮೂಲಕ ಪರಿಹಾರ ದೊರೆಕಿದ್ದು,ಅಬ್ಬಿನಹೊಳೆ ಗ್ರಾಮದಲ್ಲಿ ಕಾಲುವೆ ನಿರ್ಮಾಣ ಕಾರ್ಯ ಆರಂಭವಾಗಿದೆ.
ಪ್ರಸ್ತುತ ಚಿತ್ರದುರ್ಗ ಶಾಖಾ ಕಾಲುವೆಯ ವೈ-ಜಂಕ್ಷನ್ ನ ಚೈನೇಜ್:0.00 ಕಿ.ಮೀ. ನಿಂದ ಚೈನೇಜ್ :114.00ಕಿ.ಮೀ. ನಿರ್ಮಾಣ ಕಾರ್ಯವು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ವಿಶ್ವೇಶ್ವರಯ್ಯ ಜಲನಿಗಮವು ಫೆಬ್ರವರಿ-2026ರಅಂತ್ಯದ ವೇಳೆಗೆ ಚಿತ್ರದುರ್ಗ ಬಳಿಯ ಗೋನೂರು ಅಕ್ವೆಡಕ್ಡೆ ಚೈನೇಜ್:114.00ಕಿ.ಮೀ.ವರೆಗೆ ಪ್ರಾಯೋಗಿಕವಾಗಿ ನೀರನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ.
ಈ ನಿಟ್ಟಿನಲ್ಲಿ ಕಳೆದ ಜನವರಿ 4ರಂದು ಜಿಲ್ಲೆಯ ಎಲ್ಲಾ ಶಾಕರೊಂದಿಗೆ ನಿರ್ಮಾಣ ಕಾರ್ಯವನ್ನು ಪರಿಶೀಲಿಸಲಾಗಿದೆ. ಚಿತ್ರದುರ್ಗ ಬಳಿಯ ಗೋನೂರು ಅಕ್ವೆಡಕ್ಡ್ ವರೆಗೆ ಫೆಬ್ರವರಿ-2026ರಅಂತ್ಯದ ವೇಳೆಗೆ ಚೈನೇಜ್: 114.00ಕಿ.ಮೀ. ವರೆಗೆ ನೀರು ಬಿಡುಗಡೆ ಮಾಡಿದರೆ, ಕಡೂರು, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಈ ಶಾಖಾ ಕಾಲುವೆಯಅಡಿಯಲ್ಲಿ ಬರುವ ಸುಮಾರು 90 ಕೆರೆಗಳಿಗೆ ನೀರು ಹರಿಸಬಹುದಾಗಿದೆ.
ಬಾಕಿ ಇರುವ ಕಾಮಗಾರಿ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಕಾರಣಗಳಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನಲೆಯಲ್ಲಿ ಈ ಕಾಮಗಾರಿಯನ್ನು ನಿಗದಿತಅವಧಿಯೊಳಗೆ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರು ಹರಿಸಲು ತುರ್ತಾಗಿ 300ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡುವಂತೆ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲೆಯ ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರಪಪ್ಪಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಬೇಟಿ ವೇಳೆ ಮನವಿ ಮಾಡಿದ್ದಾರೆ.

