
ಹಿರಿಯೂರು :
ಕನ್ನಡ ಸಾಹಿತ್ಯದಲ್ಲಿ ಹಲವು ಜನ ಪ್ರಸಿದ್ಧರ ಆತ್ಮಕತೆಗಳು ಬಂದಿವೆ, ಸಾಹಿತಿಗಳು ರಾಜಕಾರಣಿಗಳು ಸಮಾಜ ಸೇವಕರು ಹೀಗೆ ಹಲವು ಕ್ಷೇತ್ರಗಳ ಅನುಭವ ಜ್ಞಾನಿಗಳು ಆತ್ಮಕಥೆಗಳನ್ನು ಬರೆದುಕೊಂಡಿದ್ದಾರೆ. ಯಾವುದೇ ಆತ್ಮಕಥೆ ಕೇವಲ ತನ್ನ ವ್ಯಕ್ತಿಯ ಜೀವನ ಚರಿತ್ರೆಯಾಗಿರದೆ ಅದು ಅವರ ಪ್ರತಿನಿಧಿಸುವ ಸಮಾಜದ ಜೀವನ ಕಥನವೂ ಆಗಿರುತ್ತದೆ ಎಂಬುದಾಗಿ ನಾಡಿನ ಸಂಸ್ಕೃತಿ ಚಿಂತಕರಾದ ಡಾ.ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯಪಟ್ಟರು.
ನಗರದ ಹುಳಿಯಾರುರಸ್ತೆಯ ಶ್ರೀಸಾಯಿಅನ್ನಪೂರ್ಣೇಶ್ವರಿ ಹೋಟೆಲ್ ಆವರಣದಲ್ಲಿ ಬಹುಜನ ಪರಿವರ್ತನಾ ವೇದಿಕೆ ತಾಲ್ಲೂಕು ಘಟಕ ಹಿರಿಯೂರು ವತಿಯಿಂದ ಆಯೋಜಿಸಲಾಗಿದ್ದ ಲೇಖಕರಾದ ಬಿ. ಸಿದ್ದಪ್ಪ ಹಿರಿಯೂರು ಇವರ ಅನುಭವ ಕಥನ ‘ಮೇಟಿ ಕೂರಿಗೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಶೋಷಣೆ ಹಿಂಸೆ ಅಸ್ಪೃಶ್ಯತೆಯ ತಾಪ ಜಾತಿ ಮೂಢನಂಬಿಕೆ ಕಂದಾಚಾರಗಳನ್ನು ಬಿ. ಸಿದ್ದಪ್ಪನವರು ತಮ್ಮ ಕೃತಿಯಲ್ಲಿ ಪರಿಚಯಿಸಿದ್ದಾರೆ. ಮೇಟಿ-ಕೂರಿಗೆ ಕೃಷಿ ಪರಿಕರಗಳ ಹೆಸರಾದರೂ ಇದು ಸ್ಥಳ ಪುರಾಣದ ಜೊತೆಗೆ ಗ್ರಾಮದ ಹೆಸರಿನ ಹಿನ್ನೆಲೆಯನ್ನು ಈ ಕಾಲದ ವಿದ್ಯಮಾನಗಳ ಜೊತೆಗೆ ವಿಚಾರ ವಿಶ್ಲೇಷಣೆಗೆ ಒಳಪಡಿಸಿದೆ.
ದಲಿತ ಮತ್ತು ಬಂಡಾಯ ಸಾಹಿತ್ಯಗಳ ಪ್ರವೇಶದ ನಂತರ ತಳಸಮುದಾಯದವರಿಗೆ ಮುಖ್ಯವಾಹಿನಿಯ ಆದ್ಯತೆ ಸಿಕ್ಕಿದೆ. ಇದು ಕೇವಲ ಹೊಲೆ ಮಾದಿಗರಿಗೆ ಮಾತ್ರ ಸೀಮಿತವಾಗಿರದೆ ಅವಕಾಶವಂಚಿತರಿಗೂ ದಕ್ಕಿದೆ. ದಲಿತತ್ವವು ವಿಶಾಲಚಿಂತನೆಯಾಗಿದ್ದು ಇದು ಸಹೋದರತೆಯ ಜೊತೆಗೆ ಸಾಮಾಜಿಕ ನ್ಯಾಯದ ಸಂಕೇತವಾಗಿದೆ. ತಳಸಮುದಾಯಗಳು ತಮ್ಮ ಹಕ್ಕಿನ ಮತಾಧಿಕಾರವನ್ನು ಆಸೆ ಹಣಕ್ಕೆ ಮಾರಿಕೊಳ್ಳದೆ ಜನತಂತ್ರವನ್ನು ಉಳಿಸುವ ಕಡೆಗೆ ಗಮನಹರಿಸಬೇಕು ಎಂಬುದಾಗಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರೊ.ಜಿ ಶರಣಪ್ಪ ಮಾತನಾಡಿ, ಬುದ್ಧಬಸವ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಕುವೆಂಪು ಅವರ ಆಶಯಗಳನ್ನು ಅಧ್ಯಯನ ಮಾಡಿದ ಹಾಗೂ ಅನುಷ್ಠಾನ ಮಾಡುವವರಲ್ಲಿ ಅಸಮಾನತೆಯ ಸೋಂಕು ಕಂಡು ಬರುವುದಿಲ್ಲ ಸಮಾಜಮುಖಿ ಚಿಂತನೆ ಇರುವವರಲ್ಲಿ ಪರಿವರ್ತನೆಯ ಈಕ್ರಾಂತಿಕಾರಕ ಮನಸ್ಸುಗಳನ್ನು ಕಾಣಲು ಸಾಧ್ಯ,
ಈ ನೆಲೆಯಲ್ಲಿ ಪೆರಿಯಾರ್ ರಾಮಸ್ವಾಮಿ, ನಾರಾಯಣಗುರು, ಸಂತಕಬೀರ್, ರವಿದಾಸ್ ಅವರ ಚಿಂತನೆಗಳು ಸಮಾಜಕ್ಕೆ ಪ್ರೇರಣೆಯಾಗಿದ್ದು, ಈ ನೆಲೆಯಲ್ಲಿ ಬಿ.ಸಿದ್ದಪ್ಪ ಅವರ ಚಿಂತನೆಗಳನ್ನು ಓದಿಕೊಂಡು ತನಗೆ ಬೇಕಾದ ರೀತಿಯಲ್ಲಿ ತಮ್ಮ ಬಾಲ್ಯದ ಕ್ರಾಂತಿಕಾರಕ ಮನಸ್ಸು ಅನುಭವಿಸಿದ ಅಸಮಾನತೆಯ ನೋವು ಕಷ್ಟ ಬಡತನ ಎಲ್ಲವನ್ನು ತಮ್ಮ ಕೃತಿಯಲ್ಲಿ ಬರೆದಿದ್ದಾರೆ ಎಂದು ಹೇಳಿದರು.

‘ಮೇಟಿ ಕೂರಿಗೆ’ ಕೃತಿ ಕುರಿತು ಮಾತನಾಡಿದ ಶ್ರೀ ಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಸದಸ್ಯರಾದ ಕೆ. ಜೆ.ಜಯಲಕ್ಷ್ಮಿನಾಯಕ ಮಾತನಾಡಿ, ತವರುಭೂಮಿ ಸಂಬಂಧವನ್ನು ಬೆಸೆದುಕೊಂಡು ಕೃತಿಗೆ ಮೇಟಿ ಕೂರಿಗೆ ಎಂಬ ಹೆಸರಿಟ್ಟಿದ್ದರೂ ಅದರಾಚೆ ಮಾನವ ಸಂಬಂಧಗಳಿಗೂ ಕೃತಿ ಬೆಸುಗೆಯಾಗಿದೆ. ಬಾಲ್ಯದ ಯಾತನೆಯ ಬಡತನ ಶೈಕ್ಷಣಿಕ ಪರಿಸರದಲ್ಲಿ ಅನುಭವಿಸಿದ ತಾರತಮ್ಯ ಎದುರಿಸಿದ ಸವಾಲುಗಳನ್ನು ಮೆಟ್ಟಿನಿಂತು ಬದುಕನ್ನು ರೂಪಿಸಿಕೊಂಡದ್ದು,
ಪದವಿ ಅಂಕಪಟ್ಟಿಗಾಗಿ ಹಿರಿಯೂರಿನಿಂದ ಮೈಸೂರಿಗೆ ಕಾಲ್ನಡಿಗೆಯಲ್ಲಿ ಹೋಗಿ ಅಂಕಪಟ್ಟಿ ತಂದ ಪ್ರಸಂಗ ಬಡತನದಲ್ಲಿ ಅನುಭವಿಸಿದ ನೋವು, ಈ ಕೃತಿಯಲ್ಲಿ ಅಡಕವಾಗಿವೆ ಶೋಷಿತ ಸಮುದಾಯಕ್ಕೆ ನಂಬಿಕೆ ಮತ್ತು ಸಿದ್ದಾಂತಕ್ಕೆ ಬದ್ದರಾದ ಸಾಮಾನ್ಯ ಜನರ ಕಷ್ಟ ಸುಖಗಳನ್ನ ಹಂಚಿಕೊಳ್ಳುವ ಜನನಾಯಕರು ಬೇಕು ಬರೀ ಪೋಸ್ ಕೊಡುವ ರಾಜಕಾರಣಿಗಳಲ್ಲ ಆದಕಾರಣ ರಾಜಕಾರಣಿಗಳನ್ನು ಆಯ್ಕೆಮಾಡುವಾಗ ಬದ್ಧತೆಸಿದ್ದಾಂತಗಳನ್ನು ರೂಢಿಸಿಕೊಂಡ ಜನನಾಯಕರನ್ನು ಆಯ್ಕೆ ಮಾಡಿಕೊಂಡಾಗ ಶೋಷಿತರ ಬದುಕು ಹಸನುಗೊಳ್ಳುತ್ತದೆ ಎಂದು ಹೇಳಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಚಮನ್ ಷರೀಫ್ ಮಾತನಾಡಿ, ಪುಸ್ತಕಗಳು ಸಮಾಜದ ವಾಸ್ತವಿಕ ವಿದ್ಯಮಾನ, ಸಂಕಷ್ಟ, ತಪ್ಪುಗಳನ್ನು ಎತ್ತಿ ತೋರಿಸುವ ಸಮಾಜ ತಿದ್ದುವ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮವಾಗಿದೆ.
ಅಲ್ಲದೆ ಪುಸ್ತಕ ಓದುವುದರಿಂದ ವ್ಯಕ್ತಿತ್ವ ವಿಕಸನ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಮತ್ತು ಸೃಜನಶೀಲತೆ ಹೆಚ್ಚಾಗುತ್ತದೆ. ಸಾಮಾಜಿಕ, ವೈಜ್ಞಾನಿಕ ವಿಷಯಗಳ ಮೂಲಕ ಜನರ ಜ್ಞಾನವನ್ನು ವಿಸ್ತರಿಸುತ್ತವೆ ಹಾಗೂ ಜಾಗೃತಿ ಮೂಡಿಸುತ್ತವೆ. ಇಂದು ಸಮಾಜಕ್ಕೆ ಹೊಸ ಸಂದೇಶ ಮಾರ್ಗದರ್ಶನ ನೀಡಲು ಪುಸ್ತಕಗಳು ಪ್ರಭಾವಬೀರುತ್ತಿವೆ ಎಂದು ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಎಚ್.ಟಿ.ಚಂದ್ರಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಎಂ ಮಲ್ಲಣ್ಣ, ಹಿರಿಯ ಪತ್ರಕರ್ತರಾದ ಟಿ.ಎನ್. ಷಣ್ಮುಖ, ಲೇಖಕರಾದ ಬಿ. ಸಿದ್ದಪ್ಪ, ಸಾಹಿತಿ ಪ್ರೊ ಎಂ.ಜಿ.ರಂಗಸ್ವಾಮಿ. ರೈತ ಸಂಘದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ. ಹೊರಕೇರಪ್ಪ. ಸ್ವಾಮಿವಿವೇಕಾನಂದ ರಾಜ್ಯ ಯುವಪ್ರಶಸ್ತಿ ಪುರಸ್ಕೃತ ಎಸ್. ಜಿ.ರಂಗಸ್ವಾಮಿ ಸಕ್ಕರ. ಕವಿ ಶಿವ ಶಂಕರ್ ಸೀಗೆಹಟ್ಟಿ, ನಗರಸಭಾ ಸದಸ್ಯರಾದ ಎಂ.ಡಿ. ಸಣ್ಣಪ್ಪ.ದಲಿತ ಪರ ಸಂಘಟನೆಯ ಕೆ. ಪಿ. ಶ್ರೀನಿವಾಸ್, ಕೆ.ರಾಮಚಂದ್ರಪ್ಪ, ವಕೀಲ ಟಿ ದ್ರುವ ಕುಮಾರ್. ಕೆ. ಆರ್. ರಘುನಾಥ್. ಜೆ.ಟಿ. ಪುಟ್ಟಮ್ಮ. ಡಿ ಎಚ್. ಹಾಲಪ್ಪ ಡಿ .ಎಚ್. ಅಶ್ವಿನಿ.ಎಸ್. ಲಿಂಗರಾಜು. ಮಂಗಳಮ್ಮ. ಗುರುಮೂರ್ತಿ ಇತರರು ಉಪಸ್ಥಿತರಿದ್ದರು.

