March 2, 2026
000001

ಹಿರಿಯೂರು :

ಸಂತೆಯಲ್ಲಿ ವ್ಯಾಪಾರ ಮಾಡುವ ಮೂಲಕ ಗಣಿತ ಕೋಣೆಯಲ್ಲಿ ಕಲಿತ ಲೆಕ್ಕಗಳನ್ನು ವ್ಯಾಪಾರದಲ್ಲಿ ಅನ್ವಯಿಸಿಕೊಳ್ಳಲು ಸಹಾಯಕವಾಗುವ ನಿಟ್ಟಿನಲ್ಲಿ  ಈ “ಮಕ್ಕಳ ಸಂತೆ”ಒಂದು ವಿನೂತನ ಕಾರ್ಯಕ್ರಮವಾಗಿದೆ ಎಂಬುದಾಗಿ ಹಿರಿಯೂರು ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಎ.ಎಂ.ಶ್ರೀಅಮೃತೇಶ್ವರಸ್ವಾಮಿ ಅವರು ಹೇಳಿದರು.

ತಾಲ್ಲೂಕಿನ ಪಟ್ರೆಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು ಆಯೋಜಿಸಲಾಗಿದ್ದ “ಮಕ್ಕಳಸಂತೆ” ಕಾಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.

ಪತ್ನೀ ಸಮೇತರಾಗಿ ಸಂತೆಮೇಳದಲ್ಲಿ ಭಾಗಿಯಾಗಿದ್ದ ಅವರು ವ್ಯವಹಾರ ಕೌಶಲ್ಯದ ಮೂಲಕ ತರಗತಿ ಕೋಣೆಯ ಕಲಿಕೆಯನ್ನು ದೃಢೀಕರಣಗೊಳಿಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರಲ್ಲದೆ, ಮಕ್ಕಳ ಸಂತೆಯಲ್ಲಿ ಹಲವು ತರಕಾರಿ, ಹಣ್ಣುಗಳನ್ನು ಖರೀದಿಸಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವೈ.ಮಹೇಶ್ ಅವರು ಮಾತನಾಡಿ, ಮಕ್ಕಳು ಸದಾ ಚಟುವಟಿಕೆಯಲ್ಲಿ ತೊಡಗಿರಬೇಕೆಂಬ ಉದ್ದೇಶದಿಂದ ಈ ಕಾಯಕ್ರಮವನ್ನು ಆಯೋಜಿಸಲಾಗಿದ್ದು,  ಮಕ್ಕಳಿಗೆ ತರಗತಿಯ ಕಲಿಕೆಯನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಒಂದು ವೇದಿಕೆಯನ್ನು ನಿರ್ಮಿಸಿದ್ದು, ವಿದ್ಯಾರ್ಥಿಗಳು ಅದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ ಎಂಬುದಾಗಿ ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪಿ.ಸುಜಾತಾ ಅವರು ಮಾತನಾಡಿ, ನಮ್ಮ ಶಾಲೆ ದ್ವಿಭಾಷಾ ಮಾದ್ಯಮದ ಶಾಲೆಯಾಗಿದ್ದು, ಒಟ್ಟು 106 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲ ಸಿಬ್ಬಂದಿ ವರ್ಗದವರ ಹಾಗೂ ಪೋಷಕರು, ಆಸಕ್ತರ ನೆರವಿನಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬುದಾಗಿ ಹೇಳಿದರು.

ಮಕ್ಕಳ ಸಂತೆಯಲ್ಲಿ ವಿವಿಧ ಹಣ್ಣುಗಳು,ತರಕಾರಿಗಳು,ಬಟ್ಟೆ,ಸಿಹಿತಿಂಡಿ,ಲೇಖನ ಸಾಮಗ್ರಿಗಳು,ಸೊಪ್ಪು-ಹೂ, ಕಾಳುಗಳು, ಮಸಾಲೆ ಸಾಮಗ್ರಿಗಳು, ತೆಂಗಿನಕಾಯಿ, ಎಳನೀರು, ಬಳೆ ವ್ಯಾಪಾರ ಮುಂತಾದ ಸಾಮಗ್ರಿಗಳು ಲಭ್ಯವಿದ್ದವು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಹೇಮಲತಾ, ಗೀತಾ, ಉಷಾರಾಣಿ, ರಾಧಾ ಅವರು, ಎಸ್.ಡಿಎಂ.ಸಿ.ಸದಸ್ಯರಾದ ಕೃಷ್ಣಾನಾಯ್ಕ್, ನಾಗರಾಜ್, ರಹಮತ್ ಉನ್ನೀಸಾ, ರವಿಜಕುಮಾರ್, ಶಕುಂತಲಾ, ಕವಿತಾಬಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *