
ಹಿರಿಯೂರು :
ಜೀತಪದ್ಧತಿಯು ಭಾರತದಲ್ಲಿ ಬಹಳದಿನಗಳಿಂದ ಅಸ್ತಿತ್ವದಲ್ಲಿದೆ, ಬಡವರು, ಹಿಂದುಳಿದವರು ಬಹುದಿನಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ಶ್ರೀಮಂತರಿಂದ ಶೋಷಣೆಗೊಳಗಾಗಿದ್ದಾರೆ, ಇಂತಹ ಶೋಷಿತರು ಜೀತಪದ್ಧತಿಯಿಂದ ಹೊರಬಂದು ಶೋಷಣೆಯಿಂದ ಮುಕ್ತರಾಗಬೇಕಾದರೆ ಮಕ್ಕಳಿಗೆ ಶಿಕ್ಷಣ ಅತ್ಯಗತ್ಯವಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.
ನಗರದ ವಾಣಿಸಕ್ಕರೆ ಸರ್ಕಾರಿಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರಸಂಘ, ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಹಮ್ಮಿಕೊಳ್ಳಬೇಕಾಗಿದ್ದ ಜೀತಪದ್ಧತಿ ನಿರ್ಮೂಲನಾದಿನಾಚರಣೆ, ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಆರ್ಥಿಕ ಸಂಕಷ್ಟಗಳು ಎದುರಾದಾಗ ಪಡೆದ ಅಲ್ಪ ಪ್ರಮಾಣದ ಸಾಲ ಹಾಗೂ ಅದರ ಬಡ್ಡಿ ತೀರಿಸಲು ಜೀವನಪೂರ್ತಿ ಬೇರೊಬ್ಬರ ಬಳಿ ಜೀತ ಮಾಡಬೇಕಾಗುತ್ತದೆ, ಹಲವು ಪ್ರಕರಣಗಳಲ್ಲಿ ಇಡೀ ಕುಟುಂಬವೇ ಜೀತ ಮಾಡಿದ್ದೂ ಇದೆ, ಇದು ನಿರ್ಮೂಲವಾಗಬೇಕಾದರೆ ಮಕ್ಕಳು ಶಿಕ್ಷಣವಂತರಾಗಬೇಕು ಎಂಬುದಾಗಿ ಹೇಳಿದರು.
ವಾಣಿಕಾಲೇಜಿನ ಪ್ರಾಚಾರ್ಯರಾದ ಡಾ.ಆರ್.ಮಹೇಶ್ ಮಾತನಾಡಿ, ಜೀತಪದ್ಧತಿ ನಿರ್ಮೂಲನೆಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಗತ್ಯ, ಸರ್ಕಾರ ಜಾರಿಗೆ ತಂದಿರುವ ಜನಕಲ್ಯಾಣ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು, ಶಿಕ್ಷಣದಿಂದ ಮಾತ್ರವೇ ಶೋಷಿತರು ಜೀತಪದ್ಧತಿಯಿಂದ ಮುಕ್ತರಾಗಲು ಸಾಧ್ಯ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಜೆ.ಲಿಂಗೆಶ್ವರ, ಕಾರ್ಮಿಕ ನಿರೀಕ್ಷಕ ರಾಜಣ್ಣ. ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ, ಉಪಾಧ್ಯಕ್ಷೆ ಕಲಾವತಿ, ಪ್ರಕಾಶ್, ಅಜಯ್ ಸೈಯದ್ ನವಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

