March 2, 2026
00004

ಹಿರಿಯೂರು :

ರಾಜ್ಯದ ಒಕ್ಕಲಿಗ-ಕುಂಚಿಟಿಗರ ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅನೇಕ ಬಡ ವಿದ್ಯಾರ್ಥಿಗಳಿಗೆ  ಹಾಗೂ ಗ್ರಾಮೀಣ ಯುವಕರಿಗೆ ವಸತಿ ಹಾಗೂ ಉದ್ಯೋಗವನ್ನು ಕಲ್ಪಿಸುತ್ತಿದ್ದಂತ ಉದಾರಿಗಳು ಗ್ರಾಮೀಣ ರೈತರ ಮಕ್ಕಳಿಗೆ “ಕೃಷಿಕ್ ಫೌಂಡೇಶನ್” ಮೂಲಕ ಐಎಎಸ್ ಕೋಚಿಂಗ್ ಸೆಂಟರ್ ಅನ್ನು ಪ್ರಾರಂಭಿಸಿದಂತಹ ನಿವೃತ್ತ ಐ.ಎ.ಎಸ್ ಅಧಿಕಾರಿಗಳಾದ ಸಿ.ಚಿಕಣ್ಣನವರು ನಿಧನ ಹೊಂದಿದ್ದು, ಅವರ ನಿಧನಕ್ಕೆ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಶ್ರೀಯುತರು ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಬಳಿಯ ತಿಪ್ಪನಹಳ್ಳಿ ಗ್ರಾಮದವರು, ಆರಂಭದಲ್ಲಿ ದಂಡಿನದಿಬ್ಬ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿ, ಆನಂತರ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ, ಆ ಸಂಸ್ಥೆಯ ರಾಜ್ಯ ಜಂಟಿ ನಿರ್ದೇಶಕರಾಗಿ, ರಾಜ್ಯ ಲಿಡ್ಕರ್ ಸಂಸ್ಥೆಯ ಕಮೀಷನರ್ ಆಗಿ ಐಎಎಸ್ ಪದವಿ ನಂತರ ಸಹಕಾರಿ ಇಲಾಖೆ ರಾಜ್ಯ ಆಯುಕ್ತರಾಗಿ ಉಡುಪಿ, ಕಾರವಾರ ಜಿಲ್ಲೆಗಳ ಜಿಲ್ಲಾಧಿಕಾರಿಗಳಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದರು.

ಐಎಎಸ್ ನಿವೃತ್ತಿ ನಂತರ ಮಾಜಿಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರವರ ಅವಧಿಯಲ್ಲಿ ರಾಜ್ಯ ಚುನಾವಣಾ ಕಮೀಷನರ್ ಆಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದು, ರಾಜ್ಯ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮೀಸಲಾತಿ ಬದಲಾವಣೆ ಸೇರಿದಂತೆ ಬಹಳ ಪ್ರಮುಖ ಪಾತ್ರ ವಹಿಸಿದ್ದರು. ನಿವೃತ್ತಿ ಜೀವನದಲ್ಲಿ ಮಧುಗಿರಿ ಕುಂಚಿಟಿಗ-ಒಕ್ಕಲಿಗರ ಸಂಘ ಹಾಗೂ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಶ್ರೀಯುತ ಸಿ.ಚಿಕ್ಕಣ್ಣನವರ ನಿಧನಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಹಾಗೂ ಪಟ್ಟನಾಯಕಹಳ್ಳಿ ಮಠದ ಶ್ರೀನಂಜಾವಧೂತಸ್ವಾಮೀಜಿ ಹಾಗೂ ಎಲೆರಾಂಪುರದ ಕುಂಚಿಟಿಗ ಮಠದ ಹನುಮಂತನಾಥ ಸ್ವಾಮೀಜಿ, ಆಂಧ್ರಪ್ರದೇಶದ ಕಾನೂನು ಮತ್ತು ಸಂಸದೀಯ ಮಾಜಿ ಸಚಿವರಾದ ನರಸೇಗೌಡ ಸೇರಿದಂತೆ ಅನೇಕ ಗಣ್ಯರು, ಮಧುಗಿರಿ ತಾಲ್ಲೂಕು ಕುಂಚಿಟಿಗ-ಒಕ್ಕಲಿಗ ಸಂಘದ ಅಧ್ಯಕ್ಷರಾದ ರಾಜಶೇಖರ್ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.

ಮಧುಗಿರಿ ತಾಲ್ಲೂಕು ತಿಪ್ಪನಹಳ್ಳಿ ಗ್ರಾಮದ ಅವರ ತೋಟದಲ್ಲಿ ಬುಧವಾರ ಸಾಯಂಕಾಲ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು ಎಂಬುದಾಗಿ  ಅವರ ಕುಟುಂಬದ ಮೂಲಗಳು ತಿಳಿಸಿವೆ.

ನಮ್ಮ ಅತ್ಯಂತ ಆತ್ಮೀಯರು ಹಾಗೂ ಹತ್ತಿರದ ಬಂಧುಗಳಾಗಿದ್ದು, ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬಸ್ಥರಿಗೆ ಕರುಣಿಸಲಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಪತ್ರಕರ್ತರುಗಳಾದ ಆಲೂರುಹನುಮಂತರಾಯಪ್ಪ ಹಾಗೂ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಪರಮೇಶ್ವರಪ್ಪ, ವೆಂಕಟೇಶ್, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ ಇವರುಗಳು ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *