March 2, 2026
00000001

ಹಿರಿಯೂರು :

ಈ 2025-26 ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಪಡೆಯದಿರುವ ಶಾಲೆಗಳು ಈ ಕೂಡಲೇ ಮಾನ್ಯತೆ ನವೀಕರಣ ಮಾಡಿಕೊಂಡು ಆರ್.ಟಿ.ಇ ರಿಎಂಬಾಸ್ ಮೆಂಟ್ ಗೆ ಪ್ರಸ್ತಾವನೆ ಸಲ್ಲಿಸಬೇಕು ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರು ಹಾಗೂ ಮುಖ್ಯಶಿಕ್ಷಕರ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ನಗರದ ಬಹಳಷ್ಟು ಶಿಕ್ಷಣ ಸಂಸ್ಥೆಗಳು ಶಿಕ್ಷಕರ ದಿನಾಚರಣೆಯ ಬಾವುಟದ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಈಗಾಗಲೇ 2 ಬಾರಿ ಶಿಕ್ಷಣ ಸಂಸ್ಥೆಗಳಿಗೆ ತಿಳುವಳಿಕೆ ನೋಟೀಸ್ ನೀಡಿದ್ದರೂ ಬಾಕಿ ಹಣವನ್ನು ಪಾವತಿಸಿಲ್ಲ, ಈ ಕೂಡಲೇ ಈ ಹಣವನ್ನು ಶಿಕ್ಷಣ ಇಲಾಖೆಗೆ ಪಾವತಿಸಬೇಕು ಎಂಬುದಾಗಿ ಹೇಳಿದರು.

ನಮ್ಮ ಇಲಾಖೆ ಸಿ.ಆರ್.ಪಿಗಳು ಹಾಗೂ ಇ.ಸಿ.ಓ ಗಳು ಭೇಟಿ ನೀಡಿದ ಸಂದರ್ಭದಲ್ಲಿ ಬಹಳಷ್ಟು ಶಾಲೆಗಳು ಶಿಕ್ಷಕರ ಹಾಗೂ ಪೋಷಕರ ಸಲಹಾ ಸಮಿತಿ ರಚಿಸಿಲ್ಲದಿರುವುದು ಕಂಡು ಬಂದಿದ್ದು, ಈ ಸಲಹಾ ಸಮಿತಿ ರಚಿಸಿಕೊಳ್ಳುವ ಮೂಲಕ ಮಕ್ಕಳ ಸುರಕ್ಷತೆಯ ಬಗ್ಗೆ ಅಗತ್ಯ ಗಮನಹರಿಸಬೇಕು ಎಂದರು.

ಅಲ್ಲದೆ ಶಾಲಾ ರಜಾ ದಿನಗಳಲ್ಲಿ ಶಾಲಾ ಆವರಣದಲ್ಲಿ ನಡೆಸುತ್ತಿರುವ ವಿಶೇಷ ತರಗತಿಗಳನ್ನು ಹಾಗೂ ಬೇಸಿಗೆ ರಜದಲ್ಲಿ ಬೇಸಿಗೆ ಶಿಬಿರಗಳನ್ನು ಯಾವುದೇ ಅನುಮತಿ ಪಡೆಯದೇ  ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಂತಹ ಶಿಕ್ಷಣ ಸಂಸ್ಥೆಗಳು ಈ ಚಟುವಟಿಕೆಗಳನ್ನು ಇಲಾಖೆಯ ಗಮನಕ್ಕೆ ತಂದು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು

ಅನುದಾನ ರಹಿತ ಶಾಲೆಗಳಲ್ಲಿ ಇಲಾಖೆ ನಿಗಧಿ ಪಡಿಸಿರುವಂತಹ ವಿದ್ಯಾರ್ಹತೆ ಹೊಂದಿರುವ ಅರ್ಹ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳತಕ್ಕದ್ದು, ಎಂದರಲ್ಲದೆ, ಪ್ರತಿ ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿವರ್ಗ ಕಡ್ಡಾಯವಾಗಿ ಪೋಲೀಸ್ ವೆರಿಫಿಕೇಶನ್ ಪ್ರಮಾಣಪತ್ರವನ್ನು ಹೊಂದಿರಬೇಕು ಎಂಬುದಾಗಿ ಅವರು ಹೇಳಿದರು.

ಯಾವುದೇ ವಿದ್ಯಾರ್ಥಿ ನಿಮ್ಮ ಶಾಲೆಗಳಿಂದ ತೇರ್ಗಡೆ ಹೊಂದಿ, ಬೇರೆ ಶಾಲೆಗೆ ಹೋಗುವಾಗ ಅವರು ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಅವರ ವರ್ಗಾವಣೆ ಪತ್ರವನ್ನು ತಡೆಹಿಡಿಯುವಹಾಗಿಲ್ಲ, ಹಾಗೆ ತಡೆ ಹಿಡಿದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಧ್ಯ ಪ್ರವೇಶಿಸಿ, ವರ್ಗಾವಣೆ ಪತ್ರವನ್ನು ನೀಡುವ ಅಧಿಕಾರ ಹೊಂದಿದ್ದಾರೆ ಎಂಬುದಾಗಿ ಎಚ್ಚರಿಸಿದರು.

ಸರ್ಕಾರ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಅನಗತ್ಯ ಹೊರೆಯನ್ನು ಕಡಿಮೆ ಮಾಡುವಂತೆ ಆದೇಶ ಹೊರಡಿಸಿದ್ದು, ಆಯಾ ವಿದ್ಯಾರ್ಥಿ ತೂಕದ ಶೇ.15ರಷ್ಟು ಮಾತ್ರ ಪುಸ್ತಕದ ಬ್ಯಾಗಿನ ಹೊರೆ ಇರಬೇಕು, ಈ ಬಗ್ಗೆ  ಖಾಸಗಿ ಶಾಲಾ ಮಂಡಳಿಗಳು ಸೂಕ್ತಗಮನ ಹರಿಸಿ, ಮಕ್ಕಳ ಪುಸ್ತಕದ ಬ್ಯಾಗಿನ ಹೊರೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದರು.

ಈಗಾಗಲೇ ಕೆಲವು ಶಾಲೆಗಳಿಗೆ ಆರ್.ಟಿ.ಇ ರಿಎಂಬಾಸ್ ಮೆಂಟ್ ನಲ್ಲಿ ಹೆಚ್ಚುವರಿ ಹಣ ಪಾವತಿಯಾಗಿದ್ದು, ಈ ಬಗ್ಗೆ ಇಲಾಖೆಯಲ್ಲಿ ಆಡಿಟ್ ಮಾಡುವಾಗ ಆಡಿಟ್ ಅಬ್ಜೆಕ್ಷನ್  ಆಗಿದೆ, ಆದ್ದರಿಂದ ಈ ಹೆಚ್ಚುವರಿ ಹಣ ಪಡೆದಿರುವ ಶಾಲೆಗಳು ಈ ಹೆಚ್ಚುವರಿ ಹಣವನ್ನು ಶಿಕ್ಷಣ ಇಲಾಖೆ ಖಾತೆಗೆ ಮರುಪಾವತಿ ಮಾಡಬೇಕು ಎಂದರಲ್ಲದೆ,

ಈ ಪಟ್ಟಿಯಲ್ಲಿ ನಗರದ ಸುಮಾರು 8 ಶಾಲೆಗಳ ಹೆಸರಿದ್ದು, ಈ ಶಾಲಾ ಆಡಳಿತ ಮಂಡಳಿಗಳು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸುವ ಮೂಲಕ ವಿವರಗಳನ್ನು ಪಡೆದುಕೊಂಡು ಈ ಕೂಡಲೇ ಶಿಕ್ಷಣ ಇಲಾಖೆಗೆ ಈ ಹೆಚ್ಚುವರಿ ಹಣವನ್ನು ಶೀಘ್ರವಾಗಿ ಮರುಪಾವತಿ ಮಾಡಲು ಅಗತ್ಯಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

ಕೊನೆಯದಾಗಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮ ಪಡಿಸುವ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಣ ಇಲಾಖೆ 2 ಪೂರ್ವಸಿದ್ದತಾ ಪರೀಕ್ಷಗಳನ್ನು ನಡೆಸಲಾಗಿದ್ದು, ತಾಲ್ಲೂಕಿನಲ್ಲಿ ಮೊದಲ ಪರೀಕ್ಷೆ ಶೇ.66 ಫಲಿತಾಂಶ ಪಡೆದಿದ್ದು, 2ನೇ ಪರೀಕ್ಷೆಯಲ್ಲಿ ಶೇ.72ರಷ್ಟು ಫಲಿತಾಂಶ ಬಂದಿರುವುದು ಸ್ವಲ್ಪ ಸಮಾಧಾನ ತಂದಿದೆ.

ಬರುವ 23 ನೇ ತಾರೀಕಿನಿಂದ 3 ನೇ ಪೂರ್ವಸಿದ್ದತಾ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಯಲ್ಲಿ ಇನ್ನೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ನವೀದ್ದೇವೆ, ಆದ್ದರಿಂದ ನಮ್ಮ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರು, ಅತ್ಯಂತ ಮುತುವರ್ಜಿ ವಹಿಸುವ ಮೂಲಕ ಉತ್ತಮ ಫಲಿತಾಂಶಕ್ಕೆ ಶ್ರಮವಹಿಸಬೇಕು,

ಅಲ್ಲದೆ ಮಾರ್ಚ್ ತಿಂಗಳಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯಲ್ಲಿ ನಮ್ಮ ತಾಲ್ಲೂಕಿಗೆ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಎಲ್ಲಾ ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರು, ಹಾಗೂ ಶಿಕ್ಷಕ-ಶಿಕ್ಷಕಿಯರು, ಹೆಚ್ಚಿನ ಜವಾಬ್ದಾರಿ ವಹಿಸುವ ಮೂಲಕ ನಮ್ಮ ಶಿಕ್ಷಣ ಇಲಾಖೆ ಜೊತೆ ಕೈಜೋಡಿಸಬೇಕು ಎಂಬುದಾಗಿ ಕರೆ ನೀಡಿದರು.

ಈ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯವಸ್ಥಾಪಕರಾದ ಶಿವಪ್ರಸಾದ್, ಶಿಕ್ಷಣ ಇಲಾಖೆ ಕಸಬಾ ನಾರ್ಥ್ ಕ್ಲಸ್ಟರ್ ಇಸಿಓ ಜಾಫರ್, ಐಮಂಗಳ ಕ್ಲಸ್ಟರ್ ಇಸಿಓ ಪುಟ್ಟಸ್ವಾಮಿ, ಧರ್ಮಪುರ ಕ್ಲಸ್ಟರ್ ಇಸಿಓ ನಾಗರಾಜ್, ಪ್ರೈಮರಿ ಇಸಿಓ ರಂಗಸ್ವಾಮಿ, ಎಫ್.ಡಿ.ಎ ನಟರಾಜ್, ಸೇರಿದಂತೆ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರು ಹಾಗೂ ಮುಖ್ಯಶಿಕ್ಷಕರುಗಳು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *