March 6, 2026
00002

ಹಿರಿಯೂರು:       

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಂಘಟನೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಕರೆನೀಡಿದ್ದ  ಹಿರಿಯೂರು ಬಂದ್ ಗೆ  ನಗರದ ಪ್ರಧಾನ ರಸ್ತೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ಹೋಟೆಲ್ ಗಳು ಬಹುತೇಕ ಬಂದ್ ಮಾಡಿ ರೈತರಿಗೆ ಬೆಂಬಲ ಸೂಚಿಸಿದವು.

ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಬಸ್ಸುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ನಗರದ ಪ್ರಧಾನ ರಸ್ತೆಗಳಲ್ಲಿ ರೈತರು ಬೈಕ್ ರ್ಯಾಲಿ ನಡೆಸಿ ಪ್ರತಿಭಟನೆ ಮತ್ತು ಬಂದ್ ನ ಜಾಗೃತಿ ಮೂಡಿಸಿದರು. ನಂತರ ಗಾಂಧೀ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಸಿದರು.

ಸಭೆಯಲ್ಲಿ ಭಾಗವಹಿಸಿದ ಜೆ.ಡಿ.ಎಸ್. ಮುಖಂಡರಾದ  ರವೀಂದ್ರಪ್ಪ  ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿ, ಆಳುವಂತ ಸರ್ಕಾರಗಳು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರೈತರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಅವರಿಗೆ ಸ್ಪಂದನೆ  ನೀಡುವುದು ಸರ್ಕಾರದ ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂಬುದಾಗಿ ಅವರು ಹೇಳಿದರು.

ಬಿ.ಜೆ.ಪಿ. ಮುಖಂಡರಾದ ಯಶ್ವಂತ್ ಮಾತನಾಡಿ ಕಾಂಗ್ರೆಸ್ ಸರ್ಕಾರದ  ಆಳ್ವಿಕೆಯಲ್ಲಿ ರಾಜ್ಯದ ಅಭಿವೃದ‍್ಧಿ ಕುಂಠಿತವಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳನ್ನು  ಮಾಡದೇ ಮತದಾರ ಪ್ರಭುಗಳಿಗೆ ವಂಚನೆ ಮಾಡುತ್ತಿದೆ. ರೈತ ಹಿತಾಸಕ್ತಿಯನ್ನು ಗಮನಿಸದೆ ಕಡೆಗಣಿಸುವ ಸರ್ಕಾರಗಳು ಬಹುದಿನ ಉಳಿಯುವುದಿಲ್ಲ   ಎಂಬುದಾಗಿ ಅವರು ಆರೋಪಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಅವರು ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ  ರೈತ ಸಂಘಟನೆಗಳು  7 ದಿನಗಳಿಂದ ನಿರಂತರವಾಗಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿವೆ. ಆದರೂ ಸಚಿವರು ರೈತರ ಅವರ ಸಮಸ್ಯೆಯನ್ನು ಆಲಿಸದೆ ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದಾರೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರ ಬಾಳು ಹಸನಾಗಬೇಕೆಂದರೆ, ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರೆ ಸೇರಿದಂತೆ  ಬೇರೆ ಬೇರೆ ಮೂಲಗಳಿಂದಲೂ   ಹೆಚ್ಚುವರಿ ನೀರನ್ನು ಹರಿಸಬೇಕಾಗಿದೆ. ಅಲ್ಲಿಯವರೆಗೂ ಈ ನಮ್ಮ ತಾಲ್ಲೂಕಿನ  ರೈತರ ಹೋರಾಟ ಧರಣಿ ಸತ್ಯಾಗ್ರಹಗಳು  ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂಬುದಾಗಿ ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ಧರಾಮಣ್ಣ, ಕಲ್ಲಪ್ಪ, ಕಾಂ ತರಾಜು, ಜಡಿಯಪ್ಪ,ಅಬ್ದುಲ್ ಗಬ್ಬರ್, ಎನ್.ತೊಪ್ಪೀರಯ್ಯ, ಹನುಮಂತ್ ರೆಡ್ಡಿ, ಶಿವಣ್ಣ, ನಾರಾಯಣಪ್ಪ, ಈರಣ್ಣ, ವಜೀರ್ ಸಾಬ್, ಮಂಜುನಾಥ್, ಜುಲೈನ ಹಟ್ಟಿಮಹಾಂತೇಶ್, ಬಗ್ಗನಾಡು ವೀರೇಶ್, ರಂಗಸ್ವಾಮಿ, ಜಯಣ್ಣ, ಜಗನ್ನಾಥ್, ಹನುಮಂತಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *