
ಹಿರಿಯೂರು:
ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಸ್ತರಣಾ ತಂತ್ರಗಳ ಮೂಲಕ ನಂದಿನಿ ಉತ್ಪನ್ನಗಳು ತಮ್ಮ ಪ್ರಾಬಲ್ಯವನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಲಿಷ್ಠಗೊಳಿಸಿಕೊಂಡಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟದಿಂದ ನೂತನವಾಗಿ ನಿರ್ಮಿಸಿರುವ ನಂದಿನಿಮಿಲ್ಕ್ ಪಾರ್ಲರ್ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಂದಿನಿ ಹಾಲು ಉತ್ಪಾದಕ ಸಂಸ್ಥೆಯು ಉತ್ತಮವಾಗಿ ಕೆಲಸ ಮಾಡುತ್ತಿದೆ. ಎಲ್ಲಾ ರೀತಿಯಲ್ಲೂ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದೆ ಎಂಬುದಾಗಿ ಅವರು ಹೇಳಿದರು.
ಶಿಮುಲ್ ಅಧ್ಯಕ್ಷರಾದ ಹೆಚ್.ಎನ್.ವಿದ್ಯಾಧರ್ ಅವರು ಮಾತನಾಡಿ ಶಿಮುಲ್ ಒಕ್ಕೂಟದಿಂದ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಹಾಗೂ ಹೊಳಲ್ಕೆರೆಯಲ್ಲಿ ಹೊಸದಾಗಿ ಪಾರ್ಲರ್ ಗಳನ್ನು ಪ್ರಾರಂಭಿಸಲಾಗಿದ್ದು, ನಂದಿನಿ ಉತ್ಪನ್ನಕ್ಕೆ ಗ್ರಾಹಕರಿಂದ ಬೇಡಿಕೆ ಬಂದಿದೆ ಎಂಬುದಾಗಿ ಅವರು ಹೇಳಿದರು.
ಶಿಮುಲ್ ಒಕ್ಕೂಟದಿಂದ ತಯಾರಾಗುವ ನಂದಿನಿಹಾಲು, ಮೊಸರು, ಬೆಣ್ಣೆ, ತುಪ್ಪ, ವಿವಿಧ ರೀತಿಯ ಸಿಹಿ ಪದಾರ್ಥಗಳು ಹಾಗೂ ಐಸ್ ಕ್ರೀಮ್ ಸೇರಿದಂತೆ ಎಲ್ಲಾ ಬಗೆಯ ಹಾಲಿನ ಉತ್ಪನ್ನಗಳು ಪಾರ್ಲರ್ ನಲ್ಲಿ ಇರಲಿವೆ.ಜೊತೆಗೆ ಒಕ್ಕೂಟ ನಿಗದಿಪಡಿಸಿರುವ ದರದಲ್ಲಿಯೇ ಗ್ರಾಹಕರಿಗೆ ಸಿಗಲಿವೆ ಎಂಬುದಾಗಿ ಅವರು ಹೇಳಿದರು.
ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ ಅವರು ಮಾತನಾಡಿ ಹಾಲು ಉತ್ಪಾದಕರೇ ಒಕ್ಕೂಟದ ಜೀವಾಳು. ಅವರಿಂದ ಹಾಲು ಖರೀದಿಸಿ, ಗ್ರಾಹಕರಿಗೆ ತಲುಪಿಸಲಾಗುತ್ತಿದೆ.
ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಇದ್ದರೂ ತಲುಪಿಸಲು ಆಗುತ್ತಿರಲಿಲ್ಲ. ನಾವು ಆಡಳಿತಕ್ಕೆ ಬಂದ ಮೇಲೆ ಈಗ ಎಲ್ಲಾ ಕಡೆಯೂ ಪಾರ್ಲರ್ ಗಳನ್ನು ತೆರೆಯಲಾಗುತ್ತಿದೆ. ಜನರಿಂದಲೂ ಉತ್ತಮ ಸ್ಪಂದನೆ ಸಿಗಲಿದೆ ಎಂಬುದಾಗಿ ಅವರು ಹೇಳಿದರು.

ಹೊಸದುರ್ಗ ನಿರ್ದೇಶಕರಾದ ಬಿ.ಆರ್.ರವಿಕುಮಾರ್ ಅವರು ಮಾತನಾಡಿ ನಂದಿನಿ ಮಿಲ್ಕ್ ಪಾರ್ಲರ್ ಪ್ರಾರಂಭದಿಂದ ಹೊಸ ಉದ್ಯೋಗ ಮಾರ್ಗ ಸಿಗುತ್ತಿದೆ. ನಂದಿನಿ ಸಂಕೇತಿಸುವ ಶುದ್ಧತೆ ಹಾಗೂ ಗುಣಮಟ್ಟ ಮತ್ತು ನಂಬಿಕೆಗೆ ಸಾಕ್ಷಿಯಾಗಿರುವ ಇದು ಗಮನಾರ್ಹ ಸಾಧನೆಯಾಗಿದೆ. ಎಂದರಲ್ಲದೆ,
ಹೈನುಗಾರಿಕೆ ಸಮುದಾಯ ಮತ್ತು ಸಹಕಾರಿ ಸಾಲದ ಭದ್ರತೆ, ಕಠಿಣ ಪರಿಶ್ರಮ ಮತ್ತು ಏಕತೆಯನ್ನು ಪ್ರತಿಬಿಂಬಿಸುತ್ತದೆ.ಹಾಲಿನ ಪೇಡಾ, ಧಾರವಾಡ ಪೇಡಾ, ಮೈಸೂರ್ ಪಾಕ್, ಬಾದಾಮ್, ಬರ್ಫಿ, ರಸಗುಲ್ಲಾ, ಕುಂದಾ ಇನ್ನಿತರ ಜನಪ್ರಿಯ ಸಿಹಿ ತಿಂಡಿಗಳು ಆಗಿವೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಜಿ.ಪಿ.ರೇವಣಸಿದ್ಧಪ್ಪ, ಜಿ.ಬಿ.ಶೇಖರಪ್ಪ, ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಜಿ.ಶೇಖರ್, ಮ್ಯಾನೇಜರ್ ಬಿ.ಕೆ.ಪ್ರಮೋದ್, ಸಹಾಯಕ ವ್ಯವಸ್ಥಾಪಕ ಹನುಮಂತಪ್ಪ,ಮಾಜಿ ನಗರಸಭೆ ಉಪಾಧ್ಯಕ್ಷರಾದ ಆರ್.ರವೀಂದ್ರನಾಯಕ್, ಮುಖಂಡರುಗಳಾದ ಗುಣಶೇಖರ್, ಜೆ.ಜೆ.ಹಳ್ಳಿ ಗೋವಿಂದರಾಜು, ಎಸ್.ಜೆ.ಹನುಮಂತರಾಯ, ಈರಣ್ಣಮಾಡದಕೆರೆ, ಮಂಜುನಾಥ್, ನಾಗರಾಜ್, ಸುರೇಶ್ ಬಾಬು, ರಂಗಸ್ವಾಮಿ, ಪವಿತ್ರ, ವರ್ಷಿಣಿ, ಶ್ರೀಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

