
ಹಿರಿಯೂರು:
ಕೇಂದ್ರ ಸರ್ಕಾರ ಜಾರಗೆ ತಂದಿರುವ ವಿ.ಬಿ.ಜಿ ರಾಮ್ ಜಿ. ಮಸೂದೆ ರದ್ದುಪಡಿಸಿ, ಮನರೇಗಾ ಮರುಸ್ಥಾಪನೆಗೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ತಾಲ್ಲೂಕಿನ ಮಸ್ಕಲ್ ಗ್ರಾಮದಿಂದ ನಗರದ ನೆಹರು ಮೈದಾನದವರೆಗೆ ಪಾದಯಾತ್ರೆ ನಡೆಸಿದರು.
ಮಸ್ಕಲ್ ಗ್ರಾಮದಿಂದ ಬೆಳಿಗ್ಗೆ 10ಕ್ಕೆ ಪಾದಯಾತ್ರೆ ಆರಂಭವಾಯಿತು. ನೂರಾರು ಕಾರ್ಯಕರ್ತರು ಜಿಲ್ಲಾ ಸಚಿವರ ಜತೆ ಸಾಗಿದರು. ದಾರಿಯುದ್ದಕ್ಕೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಮಾತನಾಡಿ ಮಹಾತ್ಮಗಾಂಧೀಜಿ ಅವರ ಗ್ರಾಮಸ್ವರಾಜ್ಯ-ರಾಮರಾಜ್ಯದ ಕನಸು ನನಸಾಗಿಸಲು ವರದಾನವಾಗಿದ್ದ ಮನರೇಗಾ ಯೋಜನೆ ಹೆಸರು ಹಾಗೂ ಅದರ ಸ್ವರೂಪ ಬದಲಾಯಸಿರುವುದು ಒಪ್ಪತಕ್ಕದಲ್ಲ.
ಕೇಂದ್ರ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿಗಳು, ಸಂವಿಧಾನ, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿವೆ. ಬಿ.ಜೆ.ಪಿ.ಯವರಿಗೆಗಾಂಧೀಜಿ-ಸಂವಿದಾನ ಎರಡರ ಮೇಲೂ ನಂಬಿಕೆ ಇಲ್ಲ. ಹೀಗಾಗಿ ಮನರೇಗಾ ಯೋಜನೆ ಹೆಸರು ಬದಲಾಯಿಸಿದ್ದಾರೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ದೇಶದ ಜನರ ಧ್ವನಿಯಾಗಿ ಹೋರಾಟ ಮಾಡುತ್ತಿದೆ. ಸಿ.ಎಂ.ಸಿದ್ಧರಾಮಯ್ಯ ಸರ್ಕಾರ ಜನರಿಗೆ ಸಾಮಾಜಿಕ, ಆರ್ಥಿಕ ಬಲ ತಂದುಕೊಡುವ ಕೆಲಸ ಮಾಡುತ್ತಿದೆ. ಪಂಚಗ್ಯಾರಂಟಿಗಳಿಗೆ ಪ್ರತಿ ವರ್ಷ 52 ಸಾವಿರ ಕೋಟಿ ರೂ.ಖರ್ಚು ಮಾಡಿದೆ.
ಅಲ್ಲದೆ, ತಾಲ್ಲೂಕಿನ 32 ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ, ವಿಬಿ.ಜಿ.ರಾಮ್ ಜಿ ಮಸೂದೆ ವಿರುದ್ಧ ಜನ ಜಾಗೃತಿ ಮೂಡಿಸಲಾಗುವುದು .ಮನರೇಗಾ ಮರುಸ್ಥಾಪಿಸುವವರೆಗೆ ಹೋರಾಟ ಜೀವಂತವಾಗಿಡಲಾಗುವುದು ಎಂಬುದಾಗಿ ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುರೇಶ್ ಬಾಬು ಅವರು ಮಾತನಾಡಿ ಕೇಂದ್ರ ಸರ್ಕಾರ ಮನರೇಗಾ ಯೋಜನೆ ಬದಲಿಸಿದೆ. ಸ್ಥಳಿಯ ಸರ್ಕಾರಗಳ ಹಕ್ಕು ಮೊಟಕುಗೊಳಿಸಿದೆ. ಬಂಡವಾಳಶಾಹಿಗಳನ್ನು ಬೆಂಬಲಿಸುವ ಕೇಂದ್ರ ಸರ್ಕಾರ ಬಡವರ ಕುತ್ತಿಗೆ ಹಿಸುಕಿದೆ. ಕಾಂಗ್ರೆಸ್ ಪಕ್ಷ ಜನರ ಧ್ವನಿಯಾಗಿ ಹೋರಾಟ ಮಾಡಲಿದೆ ಎಂಬುದಾಗಿ ಅವರು ಹೇಳಿದರು.
ಪಾದಯಾತ್ರೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಉಪಹಾರ, ಪಾನೀಯ, ಐಸ್ ಕ್ರೀಂ, ಎಳನೀರಿನ ವ್ಯವಸ್ಥೆ ಮಾಡಲಾಗಿತ್ತು.
ಈ ಪಾದಯಾತ್ರೆಯಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿಜೆ.ರಮೇಶ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಈರಲಿಂಗೇಗೌಡ, ಕೆ.ಪಿ.ಸಿ.ಸಿ ಸದಸ್ಯರಾದ ಕಂದಿಕೆರೆ ಸುರೇಶ್ ಬಾಬು, ನಗರಸಭೆ ಮಾಜಿ ಅಧ್ಯಕ್ಷರಾದ ಟಿ.ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಗೀತಾನಂದಿನಿಗೌಡ, ತಾ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಡಾ.ಜೆ.ಆರ್.ಸುಜಾತ, ಶ್ರೀಮತಿ ಮಾನಸಮಂಜುನಾಥ್, ಶ್ರೀಮತಿ ಅಂಬಿಕಾಆರಾಧ್ಯ, ಇಂದಿರಾ, ವಾಣಿ, ತಿಪ್ಪಮ್ಮ, ಮುಖಂಡರುಗಳಾದ ಸಾದತ್ ವುಲ್ಲಾ, ಕಲ್ಲಹಟ್ಟಿಹರೀಶ್, ಕೃಷ್ಣಮೂರ್ತಿ, ಡಿ.ಸಿ.ಸಿ.ಅಧ್ಯಕ್ಷರಾದ ತಾಜ್ ಪೀರ್, ಶಕೀಲ್ ನವಾಜ್, ಜಿ.ಪ್ರೇಮ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

