March 2, 2026
00003

ಹಿರಿಯೂರು :       

ಕೃಷಿ ಎಂಬುದು ಒಂದು ಶಾರೀರಿಕ ಕೌಶಲ್ಯತೆಯಿಂದ ಕೂಡಿದ್ದು, ಈ ಕೌಶಲ್ಯವನ್ನು ರೈತರು ಉತ್ತಮವಾಗಿ ಬಳಸಿಕೊಂಡಲ್ಲಿ ಮಾತ್ರ ಉತ್ತಮ ಬೆಳೆ ಹಾಗೂ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂಬುದಾಗಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯ ವಿಸ್ತರಣ ನಿರ್ದೇಶಕರಾದ ಡಾ.ಜಿ.ಕೆ.ಗಿರಿಜೇಶ್  ಅವರು  ಹೇಳಿದರು.

ನಗರದ ತೋಟಗಾರಿಕೆ ಕೃಷಿ ವಿದ್ಯಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ವಿಸ್ತರಣಾ ಸಂಸ್ಥೆ ಹೈದರಾಬಾದ್, ರಾಜ್ಯ ಸಮಿತಿ (ದಕ್ಷಿಣ) ಕೃಷಿ ವಿ.ವಿ, ಜಿ.ಕೆ.ವಿ.ಕೆ. ಬೆಂಗಳೂರು, ಕೃಷಿ  ಆತ್ಮ ಸಂಯೋಜನೆ ಹಾಗೂ ತೋಟಗಾರಿಕೆ ವಿ.ವಿ. ಹಿರಿಯೂರು ಇವರ ಸಹಯೋಗದಲ್ಲಿ 2025-26ನೇ ಸಾಲಿನ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣ ಸೇವೆಯ ಡಿಪ್ಲೋಮೋ ( ದೇಸಿ ) ಟಿ.ಪಿ. 3197  ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು  ಮಾತನಾಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡಾ ಆರ್.ನಾರಾಯಣರೆಡ್ಡಿ  ಅವರು ಮಾತನಾಡಿ, ದೇಶೀಯ ತರಬೇತಿ ಪಡೆದ ಬಳಿಕ ತಾವೆಲ್ಲರೂ ರೈತರ ಜತೆ ಉತ್ತಮ ಸಂಬಂಧ ಇಟ್ಟುಕೊಳ್ಳುವ ಮೂಲಕ ನೈಜ ತಾಂತ್ರಿಕ ಸಲಹೆ ನೀಡುವ ನಿಟ್ಟಿನಲ್ಲಿ ಕಾರ್ಯವನ್ಮುಖರಾದರೆ ಮಾತ್ರ ಈ ತರಬೇತಿಗೆ ಒಂದು ಸಾರ್ಥಕತೆ ದೊರೆಯುತ್ತದೆ ಎಂದರಲ್ಲದೆ,

ದೇಶದ ಆಹಾರ ಉತ್ಪಾದನೆಗೆ ಕೊರತೆ ನೀಗಿಸುವ ಸಲುವಾಗಿ ಸರ್ಕಾರ ಇಂತಹ ತರಬೇತಿಯನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದಲ್ಲಿ ಒಟ್ಟು 385 ಬ್ಯಾಚ್ ಗಳಲ್ಲಿ ನಾರ್ತ್ ಕರ್ನಾಟಕ ಸೇರಿದಂತೆ ಒಟ್ಟು ರೂ.9500 ಜನಕ್ಕೆ ತರಬೇತಿಯನ್ನು ನೀಡುವ ಮೂಲಕ ಬೇರೆ ರಾಜ್ಯಗಳಿಗಿಂತ  ನಮ್ಮ ರಾಜ್ಯ ದೇಶದಲ್ಲೇ ಮುಂದಿದೆ ಎಂಬುದಾಗಿ ಅವರು ಹೇಳಿದರು.

ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಶರಣಪ್ಪಜಂಗಂಡಿ ಅವರು ಮಾತನಾಡಿ, ದೇಶೀಯ ತರಬೇತಿ ಪಡೆದ ಬಳಿಕ ತಾವೆಲ್ಲ ರೈತರಿಗೆ ಕೃಷಿಯ ತಾಂತ್ರಿಕ  ವಿಜ್ಞಾನದ ವಿಚಾರ ಮುಟ್ಟಿಸುವ ಕೆಲಸ ಆಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ತೋಟಗಾರಿಕಾ ಮಹಾ ವಿದ್ಯಾಲಯದ ಡೀನ್  ಆದ ಡಾ. ಸುರೇಶ್ ಡಿ.ಏಕಬೋಟೆ  ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ  ಕೃಷಿ ವಿಜ್ಞಾನ ಕೇಂದ್ರ ಬಬ್ಬೂರಿನ ಹಿರಿಯ ವಿಜ್ಞಾನಿ ಡಾ.ಪರಶುರಾಮ್ ಚಂದ್ರ ವಂಶಿ ಹಾಗೂ ದೇಸಿ ಟಿ.ಪಿ3197 ಅನುವುಗಾರ ಜಿ.ಟಿ.ವೀರಭದ್ರರೆಡ್ಡಿ  ಇವರುಗಳು ಮಾತನಾಡಿದರು. ಈ ಸಂದರ್ಭದಲ್ಲಿ ಸುಮಾರು 40ಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *