

ಹಿರಿಯೂರು:
ತಾಲ್ಲೂಕಿನ ರೈತರ ಜಮೀನುಗಳಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳು ತಾಂತ್ರಿಕ ತೊಂದರೆಯಾದಲ್ಲಿ ಅಥವಾ ಪರಿವರ್ತಕಗಳು ಸುಟ್ಟಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ 72 ಗಂಟೆಯ ಒಳಗಡೆ ಬದಲಾಯಿಸಿಕೊಡಬೇಕು ಎಂಬ ಸರ್ಕಾರದ ಆದೇಶವಿದ್ದರೂ ಸಹ ರೈತರಿಗೆ ಇಲ್ಲಸಲ್ಲದ ಸಬೂಬು ಹೇಳಿ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂಬುದಾಗಿ ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ಬಿ.ಓ.ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿ ಆವರಣದಲ್ಲಿ ಸುಟ್ಟಿರುವ ಪರಿವರ್ತಕ ರೈತರಿಗೆ ಕೊಡುವ ಬಗ್ಗೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಬೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ವಿದ್ಯುತ್ ಪರಿವರ್ತಕ ನೀಡದಿರುವುದರಿಂದ ರೈತರ ಬೆಳೆಗಳು ಒಣಗುತ್ತಿವೆ. ಒಂದು ವಾರದ ಒಳಗೆ ರೈತರಿಗೆ ಪರಿವರ್ತಕ ನೀಡದಿದ್ದಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ, ಬೊಬಲ್ ಸ್ಟಾಕ್ ಸಹ ಇಲ್ಲದೆ ಕುಡಿಯುವ ನೀರಿಗೂ ತೊಂದರೆಯಾಗಿದ್ದು, ವಿಳಂಬ ಧೋರಣೆ ವಿರುದ್ಧ ತಮ್ಮ ಇಲಾಖೆ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಅವರು ಎಚ್ಚರಿಸಿದರು.
ಬೆಸ್ಕಾಂ ಇಲಾಖೆಯ ಈ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಬೆಂಗಳೂರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳಬೇಕು, ಎಂಬುದಾಗಿ ರಾಜ್ಯ ರೈತಸಂಘದ ಪರವಾಗಿ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಜಿಲ್ಲಾಕಾರ್ಯಾಕ್ಷರಾದ ಕೆ.ಸಿ.ಹೊರಕೇರಪ್ಪ, ತಾಲ್ಲೂಕು ಯುವಘಟಕದ ಅಧ್ಯಕ್ಷ ಚೇತನ್ ಯಳನಾಡು, ರೈತಮುಖಂಡರುಗಳಾದ ಬಿ.ಡಿ.ಶ್ರೀನಿವಾಸ್, ಹೆಚ್.ರಂಗಸ್ವಾಮಿ, ಪಿ.ಮಂಜುನಾಥ್, ಎ.ತಿಪ್ಪೇರುದ್ರಪ್ಪ, ಎನ್.ನಾಗರಾಜ, ಕೆ.ರುದ್ರವ್ವ, ಪಿ.ನಾಗರಾಜ, ಬಿ.ಲೋಕೇಶ, ಟಿ.ಮೈಲುಸ್ವಾಮಿ, ತಿಪ್ಪೇಸ್ವಾಮಿ, ಹೆಚ್.ಆರ್.ತಿಪ್ಪೇಸ್ವಾಮಿ, ಅನುಸೂಯಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.