
ಹಿರಿಯೂರು:
ಆದಿಜಾಂಬವ ಮಹಾಸಂಸ್ಥಾನ ಶಾಖಾ ಮಠದ ಸ್ಥಾಪನೆ ಸಂಬಂಧ ದಾವಣಗೆರೆಯಲ್ಲಿ ಫೆಬ್ರವರಿ14ರಂದು ಸಮುದಾಯದ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಈ ಸಭೆಗೆ ನಮ್ಮ ಒಪ್ಪಿಗೆ ಇದೆಯೆಂದು ತಿಳಿಯಬಾರದು ಎಂಬುದಾಗಿ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಅವರು ಹೇಳಿದ್ದಾರೆ.
ಮಾದಿಗ ಸಮುದಾಯದ ಸಮಾಲೋಚನೆ ಸಭೆ ನಡೆಸುವುದಕ್ಕೆ ನಮ್ಮಅಭ್ಯಂತರವಿಲ್ಲ. ಆದರೆ, ಆದಿಜಾಂಬವ ಮಹಾಸಂಸ್ಥಾನ ಶಾಖಾ ಮಠದ ಹೆಸರಲ್ಲಿ ಕರೆದಿರುವ ಸಭೆಗೆ ಮಾತ್ರ ನಮ್ಮಅನುಮತಿ ಪಡದಿರುವುದಿಲ್ಲ. ಸಭೆಗೆ ಅನೇಕ ಗಣ್ಯರ ಹೆಸರುಗಳನ್ನು ಪ್ರಕಟಿಸಲಾಗಿದೆ. ಆದ್ದರಿಂದ, ಭಕ್ತರಿಗೆ ಈ ಮೂಲಕ ಸೃಷ್ಠೀಕರಣ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಆದಿಜಾಂಬವ ಮಹಾಸಂಸ್ಥಾನ ಮಠ ಪುರಾತನವಾಗಿದ್ದು, ಮಾದಿಗರಿಗೆ ಮೂಲ ಮಠವಾಗಿದೆ. ಹಿರಿ ಶ್ರೀಗಳ ಮರಣಾನಂತರ ಕೋಡಿಹಳ್ಳಿ ಮತ್ತು ಶಾಖಾ ಮಠದಲ್ಲಿ ವಾರಾಸುದಾರರಿಲ್ಲದೆ ಭಕ್ತರು ಅನಾಥರಾಗಿದ್ದಾರೆ ಎಂಬುದು, ಮಠದ ಪರಂಪರೆಗೆ ಮುಸುಕು ಕವಿದಿದೆ ಎನ್ನುವುದು, ಮಠದಲ್ಲಿ ಪೂಜಾ ಕೈಕಂರ್ಯಗಳಿಗಾಗಿ ಹುಡುಕಾಡುವಂತಹ ಸ್ಥಿತಿ ಇದೆ ಎನ್ನುವ ಅಂಶಗಳು ಕರಪತ್ರದಲ್ಲಿ ಉಲ್ಲೇಖವಾಗಿವೆ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂಬುದಾಗಿ ಅವರು ತಿಳಿಸಿದ್ದಾರೆ.
ಆದಿಜಾಂಬವ ಮಠದ ಈಗಿನ ಸ್ವಾಮೀಜಿ ರಾಜ್ಯದಾದ್ಯಂತ ಸಂಚರಿಸುವ ಮೂಲಕ ಭಕ್ತರ ಸಂಪರ್ಕ ಇಟ್ಟುಕೊಂಡು, ಮಠದ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಅಲ್ಲದೆ, ಪುರಾತನ ಆದಿಜಾಂಬವ ಮಹಾಸಂಸ್ಥಾನ ಮಠ ಆರ್ಥಿಕ ಎರುಪೇರುಗಳನ್ನು ಕಂಡರೂ ಕೂಡ ಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ದಾವಣಗೆರೆಯ ಕೆಲವು ಭಕ್ತರು ಆದಿಜಾಂಬವ ಶಾಖಾ ಮಠದ ಸ್ಥಾಪನೆ ಬಗ್ಗೆ ಸಮಾಲೋಚನಾ ಸಭೆ ಕರೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ನಾವು ಕರಪತ್ರ ನೋಡಿದ ನಂತರ ಈ ಸೃಷ್ಠೀಕರಣ ನೀಡುತ್ತಿದ್ದೇವೆ, ಭಕ್ತರು ಗೊಂದಲಕ್ಕೆ ಈಡಾಗಬಾರದು ಎಂಬುದಾಗಿ ಅವರು ತಿಳಿಸಿದ್ದಾರೆ.
