
ಹಿರಿಯೂರು:
ತಾಲ್ಲೂಕಿನಲ್ಲಿ ಶನಿವಾರದಂದು ಆಯೋಜಿಸಲಾಗಿರುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಲಿತ ಸಂಘಟನೆಗಳ ಒಕ್ಕೂಟ ಬಹಿಷ್ಕರಿಸುವುದಾಗಿ ಘೋಷಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ತಾರತಮ್ಯ ನೀತಿ ನಿಜಕ್ಕೂಖಂಡನೀಯ ಎಂಬುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ದಲಿತ ಸಂಘಟನೆಯ ಕಾರ್ಯಾಧ್ಯಕ್ಷರಾದ ಕೆ.ಪಿ. ಶ್ರೀನಿವಾಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆ.ಪಿ. ಶ್ರೀನಿವಾಸ್ ”ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಪ್ರೇಮಿಗಳ ಸಮ್ಮೇಳನವಾಗಬೇಕಿತ್ತು. ಆದರೆ ಹಿರಿಯೂರಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ದಲಿತ ಸಂಘಟನೆಗಳ ಗಮನಕ್ಕೆ ಬಾರದೆ ನಡೆಯುತ್ತಿದೆ. ಏಳು ಪುಟಗಳ ಆಮಂತ್ರಣ ಪತ್ರಿಕೆಯಲ್ಲಿದ್ದರೂ ಸಮುದಾಯದ ಆಶಯಗಳಿಗೆ ಬೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ನಾವು ಸಮ್ಮೇಳನಕ್ಕೆ ಬಹಿಷ್ಕಾರ ಹಾಕುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು.
ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷರಾದ ತಿಮ್ಮರಾಜು ಮಾತನಾಡಿ, ಇವತ್ತಿನ ದಿನಗಳಲ್ಲಿ ಪರಿಷತ್ತು ನಮ್ಮನ್ನು ನಿರ್ಲಕ್ಷಿಸಿ, ಕಾಟಾಚಾರಕ್ಕೆ ಸಮ್ಮೇಳನ ಮಾಡುತ್ತಿದೆ, ದಲಿತ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಈ ಧೋರಣೆಯನ್ನು ನಾವು ಸಹಿಸುವುದಿಲ್ಲ. ಹೀಗೆಯೇ ಮುಂದುವರಿದರೆ ಪರಿಷತ್ತಿನ ವಿರುದ್ಧ ನಾವು ಬೀದಿಗಿಳಿದು ಉಗ್ರ ಹೋರಾಟ ಮಾಡುವುದು ಅನಿವಾರ್ಯ.”ಎಂಬುದಾಗಿ ಎಚ್ಚರಿಸಿದರಲ್ಲದೆ,
ಸಮ್ಮೇಳನದ ಸಿದ್ಧತಾ ಕಾರ್ಯಗಳಲ್ಲಿ ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಯಾವುದೇ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಳು ಪುಟಗಳ ಸುದೀರ್ಘ ಆಹ್ವಾನ ಪತ್ರಿಕೆಯನ್ನು ಹೊರತರಲಾಗಿದೆಯಾದರೂ, ಅದರಲ್ಲಿ ದಲಿತ ಸಮುದಾಯದ ಪ್ರಾತಿನಿಧ್ಯ ಕೇವಲ ‘ಕಾಟಾಚಾರಕ್ಕೆ’ ಸೀಮಿತವಾಗಿದೆ. ಹಿರಿಯೂರಿನ ಸಾಹಿತ್ಯ ಸಮ್ಮೇಳನವು ಎಲ್ಲ ವರ್ಗದವರನ್ನು ಸಮಾನವಾಗಿ ಗೌರವಿಸುವಲ್ಲಿ ವಿಫಲವಾಗಿದೆ ಎಂಬುದಾಗಿ ದೂರಿದರು.
ಈ ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷರಾದ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕಾರ್ಯದರ್ಶಿಗಳಾದ ರಾಘವೇಂದ್ರ, ಓಂಕಾರಪ್ಪ, ರಘುನಾಥ್ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.

