March 2, 2026
0000001

ಹಿರಿಯೂರು :

ನಗರದ ದಕ್ಷಿಣಕಾಶಿ ಎಂದೇ ಹೆಸರಾಗಿರುವ ಶ್ರೀತೇರುಮಲ್ಲೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರದಂದು ಮದ್ಯಾಹ್ನ 1-45ರ ಸಮಯದಲ್ಲಿ ಅದ್ದೂರಿಯಾಗಿ ನಡೆಯಿತು.

ಆ ದಿನ ಬೆಳಗಿನಿಂದಲೇ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿದ್ದವು . ಬೆಳಿಗ್ಗೆ 9:00ಕ್ಕೆ ದೇವಸ್ಥಾನದಲ್ಲಿದ್ದ ಶಿವಧನಸ್ಸು ಹೊರ ತೆಗೆದು ಸಮೀಪದ ವೇದಾವತಿ ನದಿಗೆ ತೆಗೆದುಕೊಂಡು ಹೋಗಿ ಗಂಗಾ ಸ್ನಾನ ಮಾಡಿಸಿ ದೇವಾಲಯಕ್ಕೆ ತರಲಾಯಿತು.

ಅನಂತರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ವಿವಿಧ ಹೂಗಳು ಬಣ್ಣ ಬಣ್ಣದ ಬಟ್ಟೆ ಬೃಹತ್ ಗಾತ್ರದ ಹಾರಗಳಿಂದ ಅಲಂಕಾರಗೊಂಡ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿ ಮುಜರಾಯಿ ಇಲಾಖೆ ಅಧಿಕಾರಿ ಹಾಗೂ ತಹಶೀಲ್ದಾರ್ ಎಂ.ಸಿದ್ದೇಶ್ ಪೂಜೆ ನೆರವೇರಿಸಿದರು.

ನಂತರ ಭಕ್ತರ ಸಮ್ಮುಖದಲ್ಲಿ ಭಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಿತು, ಹರಾಜಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು 60 ಲಕ್ಷ ರೂಗಳಿಗೆ ಮುಕ್ತಿಬಾವುಟವನ್ನು ಪಡೆದರು, ಬಳಿಕ ಸಚಿವ ಡಿ.ಸುಧಾಕರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.

ನೂರಾರು ಭಕ್ತಾದಿಗಳು ಹರ ಹರ ಮಹಾದೇವ ಎಂದು ದೇವರನ್ನು ಸ್ಮರಿಸುತ್ತಾ ರಥದ ಹಗ್ಗವನ್ನು ಹಿಡಿದು ಎಳೆಯುವ ಮೂಲಕ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಬ್ರಹ್ಮರಥೋತ್ಸವ ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ವಾಸವಿ ರಸ್ತೆಯ ಮೂಲಕ ಸಿದ್ದನಾಯಕ ವೃತ್ತದವರೆಗೂ ತಲುಪಿತು.

 ಸಾವಿರಾರು ಭಕ್ತರು ಭಕ್ತಿಯಿಂದ ತೇರು ಎಳೆದು ತಮ್ಮ ಭಕ್ತಿ ಸಮರ್ಪಿಸಿದರು, ಬ್ರಹ್ಮರಥೋತ್ಸವದ ನಂತರ ಸಂಜೆ ಚಂದ್ರಮೌಳೇಶ್ವರ ಹಾಗು ಉಮಾಮಹೇಶ್ವರ ಸ್ವಾಮಿ ರಥೋತ್ಸವ ಸಹ ನಡೆಯಿತು, ಸುಗಮ ರಥೋತ್ಸವಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ನಗರದ ಟಿಟಿ ರೋಡ್, ದುರ್ಗಾಂಬಿಕಾ ರಸ್ತೆ, ಆಸ್ಪತ್ರೆರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಾಹನಗಳ ಪ್ರವೇಶ ಇಲ್ಲದಂತೆ ಮಾಡಲಾಗಿತ್ತು, ತೇರು ಸಾಗುವ ರಸ್ತೆಯುದ್ಧಕ್ಕೂ ನೂರಾರು ಯುವಕರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಸಚಿವರಾದ ಡಿ.ಸುಧಾಕರ್ ರವರನ್ನು ಅಲಂಕಾರಗೊಂಡ ಎತ್ತಿನಗಾಡಿಯಲ್ಲಿ ಕರೆತರಲಾಯಿತು.

ಜಾತ್ರೆಗೆ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ತಮ್ಮ ಭಕ್ತಿ ಸಮರ್ಪಿಸಿದರು. ತೇರು ಸಾಗುವ ರಸ್ತೆ ಅಕ್ಕಪಕ್ಕಗಳಲ್ಲಿ ಜಾತ್ರೆಗೆ ಬಂದಂತಹ ಭಕ್ತಾಧಿಗಳಿಗೆ ನಗರದ ನಾಗರೀಕರು ರಸ್ತೆಯುದ್ಧಕ್ಕೂ ಮಜ್ಜಿಗೆ, ಪಾನಕ, ಕೋಸಂಬ್ರಿ, ಹಾಗೂ ಪಲಾವ್, ಚಿತ್ರಾನ್ನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ರಥೋತ್ಸವ ಸಾಗುವ ದಾರಿಯುದ್ಧಕ್ಕೂ ಬಾಳೆಹಣ್ಣು, ಹೂವು, ದವನ, ರಥಕ್ಕೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿ, ತಮ್ಮ ಸಂಕಲ್ಪ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತಾದಿಗಳು ಬಾಳೆಹಣ್ಣಿನಮೇಲೆ ತಮ್ಮ ಬೇಡಿಕೆಗಳನ್ನು ಬರೆದು ತೇರಿಗೆ ಬಾಳೆಹಣ್ಣು ಎಸೆಯುವುದು ಕೆಲವೆಡೆ ಕಂಡು ಬಂದಿತು.

ಶ್ರೀತೇರುಮಲ್ಲೇಶ್ವರಸ್ವಾಮಿ ಜಾತ್ರೆ ಮಹೋತ್ಸವ ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ನಾಗೇಂದ್ರನಾಯ್ಕ, ಅಮೃತೇಶ್ವರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಅಭಿನಂದನ್, ಜನಾರ್ಧನ್, ಭಕ್ತಾದಿಗಳು ಹಾಗೂ ತಾಲೂಕಿನ ಜನತೆ, ನಗರಸಭೆ ಮಾಜಿ ಹಾಗೂ ಹಾಲಿ ಅಧ್ಯಕ್ಷರು, ಸದಸ್ಯರುಗಳು, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು, ಸದಸ್ಯರುಗಳು,ಕಾಂಗ್ರೆಸ್ ಮುಖಂಡರು, ಬಿಜೆಪಿ ಮುಖಂಡರು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *