March 6, 2026
00002

ಹಿರಿಯೂರು :

ಸುಮಾರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ಕೈಗೊಂಡ ಬಸವಾದಿ ಶರಣರ ಅಗ್ರಗಣ್ಯ ಬಳಗದಲ್ಲಿ ಮಾಚಿ ದೇವರಿಗೆ ವಿಶಿಷ್ಟವಾದ ಸ್ಥಾನವಿದೆ, ಕಲ್ಯಾಣದ ಕ್ರಾಂತಿಯಾದ ಸಂದರ್ಭದಲ್ಲಿ   ವಚನ ಕಟ್ಟುಗಳನ್ನು  ಕೆಲವರು ನಾಶಪಡಿಸಲು ಹೋದಾಗ ಅವುಗಳನ್ನು ಸಂರಕ್ಷಿಸಿದ ಕೀರ್ತಿ ಮಾಚಿದೇವರಿಗೆ ಸಲ್ಲುತ್ತದೆ,   ಅದಕ್ಕೆ ಅವರನ್ನು ವಚನ ಸಾಹಿತ್ಯ ಸಂರಕ್ಷಕ ಎಂದು ಕರೆಯುತ್ತೇವೆ ಎಂಬುದಾಗಿ ಮಹಾತ್ಮ ಗಾಂಧಿ ರಾಷ್ಟೀಯ ಸೇವಾಪ್ರಶಸ್ತಿ  ಪುರಸ್ಕೃತ ಪ್ರಾಂಶುಪಾಲ ಎನ್. ಧನಂಜಯ  ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶರಣ ಮಡಿವಾಳ ಮಾಚಿದೇವರ 916ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ನಂತರ ಅವರು ಮಾತನಾಡಿದರು.

ಮಡಿವಾಳ ಮಾಚಿದೇವರು ದೈವಾಂಶ ಸಂಭೂತ ವೀರಭದ್ರನ ಅವತಾರ,  ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರಹಿಪ್ಪರಗಿಯಲ್ಲಿ ತಾಯಿ ಸುಜ್ಞಾನಮ್ಮ, ತಂದೆ ಪರ್ವತಯ್ಯನವರ ಮಗನಾಗಿ ಜನಿಸಿದ ಅವರು ಕ್ರಾಂತಿಕಾರಿ ಗುರುಮಲ್ಲಿಕಾರ್ಜುನಯ್ಯನವರಿಂದ ಸಕಲಶಾಸ್ತ್ರಗಳನ್ನು ಕಲಿಯುತ್ತಾರೆ, ಲಿಂಗಣ್ಣಚಾರ್ಯರಿಂದ ಶಸ್ತ್ರಾಭ್ಯಾಸವನ್ನು ಕಲಿತು, ನಂತರ ಮಲ್ಲಿಗೆಮ್ಮ ಎನ್ನುವಂತಹ ಯುವತಿಯನ್ನು ವರಿಸುತ್ತಾರೆ,

ಇದಾದ ನಂತರ ಕಲಿದೇವರ ಅಪ್ಪಣೆ ಪಡೆದ ಮಾಚಿದೇವ ಕಲ್ಯಾಣದತ್ತ ಹೊರಡುತ್ತಾರೆ, ಕಲ್ಯಾಣಕ್ಕೆ ಬಂದಂತಹ ಸಂದರ್ಭದಲ್ಲಿ ಅವರು ತಮ್ಮ ಕಾಯಕಕ್ಕೆ ಕೆಲವು ನಿಬಂಧನೆಗಳನ್ನು ಹಾಕಿಕೊಳ್ಳುತ್ತಾರೆ, ಅವುಗಳೆಂದರೆ ಭಕ್ತಿ ಮಾರ್ಗನುವರ್ತಿಗಳಾದ ಶರಣರ ವಸ್ತ್ರಗಳನ್ನು ಮಾತ್ರ ಮಡಿ ಮಾಡುವಿಕೆ, ಕಳವು, ಕೊಲೆಸುಲಿಗೆ ಕ್ರೂರತನ ಕುತಂತ್ರಗಳಿಂದ ಹೊಟ್ಟೆ ಒರೆಯುವವರ ಬಟ್ಟೆ ಮುಟ್ಟಬಾರದು,

ಈ ರೀತಿ ನಿಬಂಧನೆ ಹಾಕಿಕೊಂಡು ಸತ್ಯ ಶುದ್ಧ ಕಾಯಕ ಮಾಡುವಂತಹ ಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡುವಂತಹ ಕೆಲಸವನ್ನು ಮಾಡುತ್ತಿರುತ್ತಾನೆ, ಒಂದು ಬಾರಿ ರಾಜ ಬಿಜ್ಜಳನ ಬಟ್ಟೆಗಳನ್ನ ಮಡಿ ಮಾಡದೆ ತಿರಸ್ಕರಿಸುತ್ತಾನೆ,  ಸಿಟ್ಟಿಗೆದ್ದ ಬಿಜ್ಜಳ ಮಾಚಿದೇವನನ್ನ ಸೆರೆ ಹಿಡಿಯಲು ಸೈನಿಕರನ್ನು ಹಾಗೂ ಮದಗಜವನ್ನು ಕಳಿಸುತ್ತಾನೆ, ಮದಗಜವನ್ನು ಅತ್ತಿಗೈದು ಸೈನಿಕರನ್ನು ಎದುರಿಸುತ್ತಾನೆ

ಕೊನೆಗೆ ಮಾಚಿದೇವನ ಪವಾಡವನ್ನರಿತ ಬಿಜ್ಜಳ ಶರಣಾಗುತ್ತಾನೆ, ನಂತರ ಅನುಭವ ಮಂಟಪದ ಪ್ರವೇಶವಾದಾಗ ಅಲ್ಲಮಪ್ರಭುಗಳು ಮಾಚಿದೇವ ನನ್ನ ಸಾಕಷ್ಟು ಪ್ರಶ್ನಿಸುತ್ತಾರೆ,  ಎಲ್ಲದಕ್ಕೂ ವಚನಗಳ ಮೂಲಕ ಸಮರ್ಥ ಉತ್ತರವನ್ನು ಮಾಚಿದೇವರು ನೀಡುತ್ತಾರೆ, ಬಸವಣ್ಣನವರ ರಚಿತ ಈ ವಚನವೇ  ಮಾಚಯ್ಯನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ,

ಚನ್ನ ಬಸವಣ್ಣನೊಡಗೂಡಿ ಹಲವು ಶರಣರೊಡನೆ ಉಳಿವಿಯವರೆಗೂ ಸಾಗುತ್ತಾರೆ, ಅರಸುತನ ಮೇಲಲ್ಲ ಆಗಸುತನ ಕೀಳಲ್ಲ  ಎನ್ನುವ ಸಂದೇಶ ನೀಡುತ್ತಾರೆ, ಈ ಸಂದರ್ಭದಲ್ಲಿ ರಾಜಪ್ರಭುತ್ವದ ವಿರುದ್ಧ ಸಂಘರ್ಷಕ್ಕಿಳಿಯುತ್ತಾರೆ, ಮಾಚಿದೇವರ ಶ್ರದ್ದೆ,  ಸತ್ಯ, ಶುದ್ಧಕಾಯಕ  ಧರ್ಮನಿಷ್ಠೆ   ನ್ಯಾಯಪರ ವ್ಯಕ್ತಿತ್ವಕ್ಕೆ ಇಡೀ ಕಲ್ಯಾಣ ಅವರನ್ನು ಕೊಂಡಾಡುತ್ತದೆ,

ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವಂತಹ ಮಡಿವಾಳ ಸಮಾಜವು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ,   ಸರ್ಕಾರ ಇಂತಹ ಸಣ್ಣ ಸಮುದಾಯಗಳನ್ನು ಗುರುತಿಸಿ, ಪೋಷಿಸಬೇಕಾಗಿದೆ, ಹಾಗಾದಾಗ ಮಾತ್ರ ಮಾಚಿದೇವರ ಸ್ಮರಣೆ ಅರ್ಥಪೂರ್ಣವಾಗುತ್ತದೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರರಾದ ಸಿ.ಜೆ.ಕೃಷ್ಣಕುಮಾರ್ ವಹಿಸಿದ್ದರು. ಮಡಿವಾಳ ಸಮಾಜದ ತಾಲೂಕು ಘಟಕದ ಅಧ್ಯಕ್ಷ ವಿ.ಸಿದ್ದೇಶ್   ಹಾಗೂ ಪದಾಧಿಕಾರಿಗಳು ಸಮಾಜದ ಮುಖಂಡರು, ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *