March 6, 2026
0003

ಹಿರಿಯೂರು :

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆಬ್ರವರಿ 7 ರಂದು ನಡೆಯುವ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಜಿ.ರಂಗಸ್ವಾಮಿಯವರು  ಹಿರಿಯೂರು ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದವರು. 1962ರ ಮಾರ್ಚ್ 25 ರಂದು ಜನಿಸಿದ ಶ್ರೀಯುತರು  ಆರ್.ಗುಡುದಯ್ಯ ಮತ್ತು ಎಂ.ರಂಗಮ್ಮನವರ ಸುಪುತ್ರರು.

ಸ್ವಗ್ರಾಮ ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಮುಗಿಸಿ ತುಮಕೂರಿನ ಸಿದ್ಧಗಂಗಾ ಮಠ, ಮೈಸೂರು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದು ಮಾನಸಗಂಗೋತ್ರಿಯಲ್ಲಿ ಡಿಪ್ಲೊಮಾ-ಇನ್-ಇಂಗ್ಲೀಷ್ ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆಯುತ್ತಾರೆ.

ಮೂವತ್ತೈದು ವರ್ಷಗಳ ಕಾಲ ಹಿರಿಯೂರು ತಾಲೂಕು ಧರ್ಮಪುರ ಗ್ರಾಮದ ಶ್ರೀಪಂಚಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ 2022ರ ಮಾರ್ಚ್ 31 ರಂದು ನಿವೃತ್ತರಾಗಿ ಹಿರಿಯೂರು ನಗರದಲ್ಲಿ ನೆಲೆಸಿದ್ದಾರೆ. ಹವ್ಯಾಸಿ ಪತ್ರಕರ್ತರು, ಕ್ರೀಡೆ, ಪ್ರವಾಸ, ಛಾಯಾಗ್ರಹಣ, ಓದು ಇವರ ಆಸಕ್ತಿಗಳು. ಇವರ ಕೆಲವು ಬಿಡಿ ಲೇಖನಗಳು ದಿನಪತ್ರಿಕೆ, ಸ್ಮರಣಸಂಚಿಕೆ, ವಿಶೇಷ ಪುರವಣಿಗಳಲ್ಲಿ ಪ್ರಕಟವಾಗಿವೆ.

ಅನೇಕ ವರ್ಷಗಳ ಕಾಲ ಹಿರಿಯೂರು ತಾಲೂಕು ಕೇಂದ್ರದಿಂದ ವಿಜಯಕರ್ನಾಟಕ ದಿನಪತ್ರಿಕೆಗೆ ವರದಿಗಾರರಾಗಿದ್ದರು. ಹಿರಿಯೂರು ಸೀಮೆ ಜಾನಪದ’ ಎಂಬ ಇವರ ಬಿಡಿ ಲೇಖನಗಳ ಸಂಗ್ರಹ ಕೃತಿಯನ್ನು 2014ರಲ್ಲಿ ಸಿವಿಜಿ ಇಂಡಿಯಾ ಪ್ರಕಟಿಸಿದೆ.  ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್, ಮಾರಿಕಣಿವೆ ವಾಣಿವಿಲಾಸ ಸಾಗರ ನಿರ್ಮಾಣದ ಕತೆ, ತುಮಕೂರು ಜಿಲ್ಲೆಯಲ್ಲಿ ಬುಕಾನನ್ ಎಂಬುವುದು ಇವರ ಅನುವಾದಿತ ಕೃತಿಗಳಾಗಿವೆ.

ನೆಲದ ಸಂಕಥನ, ದುರುಗಸೀಮೆ ಸಾಧಕರು ಕೃತಿಗಳು ಪ್ರಕಟವಾಗಿವೆ. ಡಾಬ್ಸ್ ಆಡಳಿತದ ನೋಟಗಳು ಇವರ ನಾಲ್ಕನೆಯ ಅನುವಾದಿತ ಕೃತಿಯಾಗಿದ್ದು, ಬೆಂಗಳೂರು ಸೀಮೆಯಲ್ಲಿ ಬುಕಾನನ್” ಎಂಬ ಕೃತಿ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ ಆಗಲಿದೆ. ಚಂದನ ದೂರದರ್ಶನ- ಶುಭೋದಯ ಕರ್ನಾಟಕದಲ್ಲಿ ಇವರ ನೇರ ಸಂದರ್ಶನ ಪ್ರಸಾರವಾಗಿದೆ.

ಜೂನ್ 2024ರಲ್ಲಿ ಚಿತ್ರದುರ್ಗ ಆಕಾಶವಾಣಿ ಕೇಂದ್ರದಿಂದ ಸರ್ವೇಕ್ಷಣಾಧಿಕಾರಿ ಹಾಗೂ ಫಿಜೀಷಿಯನ್ ಡಾ.ಫ್ರಾನ್ಸಿಸ್ ಬುಕಾನನ್, ಮಾರಿಕಣಿವೆ ಜಲಾಶಯದ ನೀಲನಕ್ಷೆ ರಚಿಸಿದ ಎಂಜಿನಿಯರ್ ಹೆಚ್.ಡಿ.ರೈಸ್ ಮತ್ತು ಚಿತ್ರದುರ್ಗ ವಿಭಾಗದ ಪ್ರಥಮ ಸೂಪರಿಂಟೆಂಡೆಂಟ್ (ಜಿಲ್ಲಾಧಿಕಾರಿ) ರಿಚರ್ಡ್ ಸ್ಟೀವರ್ಟ್ ಡಾರ್ಬ್ಸ್ (ಆರ್.ಎಸ್.ಡಾಬ್ಸ್) ರ ಸಾಧನೆ ಕುರಿತು ಸರಣಿ ರೇಡಿಯೋ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿದ್ದಾರೆ.

ಇವರ ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್ ಕೃತಿಯ ಆಯ್ದ ಅಧ್ಯಾಯಗಳನ್ನು ದಾವಣಗೆರೆ ವಿಶ್ವವಿದ್ಯಾಲಯ  ಬಿ.ಕಾಂ ಮತ್ತು ಬಿ.ಬಿ.ಎ. ಪದವಿ ತರಗತಿಯ ಮೂರನೇ ಸೆಮಿಸ್ಟರ್ ನ ಕನ್ನಡ ಪಠ್ಯ ಪುಸ್ತಕದಲ್ಲಿ 2025ರಲ್ಲಿ ಬಳಸಿಕೊಂಡಿದೆ. 2025ರಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಹತ್ವದ ಯೋಜನೆಯಾದ ದಿ ಮೈಸೂರು ಟ್ರೈಬ್ಸ್ ಅಂಡ್ ಕಾಸ್ಟ್ಸ್’ಸಂಪುಟಗಳ (ಇಂಗ್ಲಿಷ್ ನಿಂದ ಕನ್ನಡ) ಅನುವಾದ ಕಾರ್ಯದಲ್ಲಿ ಇದೀಗ ನಿರತರಾಗಿದ್ದಾರೆ.                   ಶ್ರೀಯುತರಿಗೆ ಚಿತ್ರದುರ್ಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.

About The Author

Leave a Reply

Your email address will not be published. Required fields are marked *