
ಹಿರಿಯೂರು:
ತಾಲ್ಲೂಕಿನ ಆರಾಧ್ಯದೈವ ಶ್ರೀತೇರುಮಲ್ಲೇಶ್ವರಸ್ವಾಮಿಯ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ಈಗ ರಾಜಕೀಯ ಸಮರಕ್ಕೆ ವೇದಿಕೆಯಾಗಿದೆ. ಕಳೆದ ಎರಡು ವರ್ಷಗಳಿಂದ ಹರಾಜಿನಲ್ಲಿ ಪಡೆದ ಮುಕ್ತಿ ಬಾವುಟದ ಹಣವನ್ನು ಹಿರಿಯೂರು ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಇದುವರೆಗೂ ಪಾವತಿಸಿಲ್ಲ ಎಂಬುದಾಗಿ ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ.ಅಭಿನಂದನ್ ರವರು ಗಂಭೀರ ಆರೋಪ ಮಾಡಿದ್ದಾರೆ.
ಶ್ರೀತೇರುಮಲ್ಲೇಶ್ವರ ಸ್ವಾಮಿ ರಥೋತ್ಸವದ ವೇಳೆ ಅತ್ಯಂತ ಭಕ್ತಿಯಿಂದ ಹರಾಜು ಹಾಕಲಾಗುವ ಈ ಮುಕ್ತಿ ಬಾವುಟವು ಸುಮಾರು ಲಕ್ಷ ರೂಪಾಯಿಗಳಿಗೆ ಹರಾಜಾಗಿತ್ತು. ಆದರೆ ಈ ಬೃಹತ್ ಮೊತ್ತವನ್ನು ಶಾಸಕರು ಮುಜರಾಯಿ ಇಲಾಖೆಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬುದಾಗಿ ಅಭಿನಂದನ್ ಅವರು ದೂರಿದ್ದಾರೆ.
ದೇವಸ್ಥಾನದ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣವನ್ನು ಶಾಸಕರು ತಮ್ಮಲ್ಲೇ ಇಟ್ಟುಕೊಂಡಿರುವುದು ದೈವ ಕಾರ್ಯಕ್ಕೆ ಬಗೆದ ದ್ರೋಹ. ಪ್ರತಿಷ್ಠೆಗಾಗಿ ಹರಾಜಿನಲ್ಲಿ ಪಾಲ್ಗೊಂಡು ಈಗ ಹಣ ಸಂದಾಯ ಮಾಡದೆ ಇರುವುದು ಸರಿಯಲ್ಲ. ಸುಧಾಕರ್ ಅವರು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಇಲಾಖೆಗೆ ಹಣವನ್ನು ಜಮೆ ಮಾಡಬೇಕು ಎಂಬುದಾಗಿ ಅವರು ಆಗ್ರಹಿಸಿದ್ದಾರೆ.
