
ಹಿರಿಯೂರು :
ಪರೀಕ್ಷೆಯಲ್ಲಿ ಜಯಶೀಲರಾಗಬೇಕೆಂದು ಬಯಸುವವರೆಲ್ಲರೂ ಅತಿ ಬುದ್ಧಿವಂತರಾಗಲಿ ಸೃಜನಶೀಲರಾಗಲಿ ಆಗಿರಲೇಬೇಕೆಂದೇನೂ ಇಲ್ಲ, ಜ್ಞಾನಾರ್ಜನೆಗಾಗಿ ಅಧ್ಯಯನ ಮಾಡುವುದು ಎಷ್ಟು ಮುಖ್ಯವೋ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಕ್ಕಾಗಿ ಅಧ್ಯಯನ ಮಾಡುವುದು ಅಷ್ಟೇ ಮುಖ್ಯ ಎಂಬುದು ನೆನಪಿರಲಿ ಎಂಬುದಾಗಿ ಸಂಪನ್ಮೂಲವ್ಯಕ್ತಿ ಎನ್.ಧನಂಜಯ ಹೇಳಿದರು.
ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿಶೇಷ ಕಾರ್ಯಾಗಾರದಲ್ಲಿ “ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ” ಎನ್ನುವ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ, ನಂತರ ಅವರು ಮಾತನಾಡಿದರು.
ವಿದ್ಯಾರ್ಥಿಗಳೇ ಆತಂಕ ಬಿಟ್ಟು ಪರೀಕ್ಷೆಗೆ ತಯಾರಾಗಿ, ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ, ಓದಿನಲ್ಲಿ ತನ್ಮಯತೆ ಮತ್ತು ಸತತ ಅಭ್ಯಾಸದಿಂದ ಏಕಾಗ್ರತೆಯನ್ನು ಪಡೆದುಕೊಳ್ಳಬಹುದು ಇದರಿಂದ ಆತ್ಮವಿಶ್ವಾಸ ಹೆಚ್ಚಿ, ಪರೀಕ್ಷೆಯ ಭಯ ನಿವಾರಣೆಯಾಗುತ್ತದೆ, ಪರೀಕ್ಷೆಯ ದಿನದ ವಿದ್ಯಾರ್ಥಿಗಳ ಮನಸ್ಥಿತಿ ಅವರ ಬರವಣಿಗೆ ಮೇಲೆ ಪ್ರಭಾವ ಬೀರುತ್ತದೆ,
ಹಾಗಾಗಿ ಕೆಲವು ಸೂಚನೆಗಳನ್ನು ಪಾಲಿಸುವುದು ಸೂಕ್ತ, ಅವುಗಳೆಂದರೆ ಪಾಠಗಳನ್ನು ಪರಿಪೂರ್ಣವಾಗಿ ಓದಿಕೊಳ್ಳುವುದು, ಪಾಠದಲ್ಲಿನ ಪ್ರತಿವಾಕ್ಯವು ಬಹುಮುಖ್ಯ ವಾಕ್ಯಗಳೇ, ಪ್ರಶ್ನೆಗಳಾಗಿ ಬರಬಹುದು ತುಂಬಾ ಕಷ್ಟಕರವಾದದನ್ನು, ಪರೀಕ್ಷಾಸಮಯದಲ್ಲಿ ಓದಲು ಪ್ರಯತ್ನಿಸಬೇಡಿ, ಮನನ ಮಾಡಿಕೊಳ್ಳಬೇಕಾದ ಪದ್ಯಗಳನ್ನು ಮುಂಚಿತವಾಗಿ ಮಾಡಿಕೊಳ್ಳಬೇಕು.
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಕೃತ ವೆಬ್ ಸೈಟ್ ಗಳಲ್ಲಿ ಬ್ಲೂಪ್ರಿಂಟ್ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಪ್ರಕಟಮಾಡಿದ್ದು, ಅವುಗಳನ್ನು ಸತತವಾಗಿ ಅಭ್ಯಾಸಕ್ಕೆ ಬಳಸಿಕೊಳ್ಳಿ, ಓದಿದ್ದನ್ನು ಬರೆಯುವಂತಹ ಅಭ್ಯಾಸವನ್ನು ಕರಗತ ಮಾಡಿಕೊಳ್ಳಿ, ಆಗಾದಾಗ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ,
ದಿನಪತ್ರಿಕೆ ಮ್ಯಾಗ್ ಜಿನ್ ಓದು ಯೂಟ್ಯೂಬ್ ಉಪನ್ಯಾಸಗಳು ಸತ್ಸಂಗ ಸಾರ್ವಜನಿಕ ಗ್ರಂಥಾಲಯದ ಬಳಕೆ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂದಿನಿಂದಲೇ ತಯಾರಿ ನಡೆಸಿ ಎಸ್ ಎಸ್ ಎಲ್ ಸಿ ನಂತರ ಕಲಾ ವಾಣಿಜ್ಯ ವಿಜ್ಞಾನ ಕೋರ್ಸ್ ಗಳ ಹೊರತಾಗಿ ಡಿಪ್ಲೋಮೋ ಐಟಿಐ ಪ್ಯಾರಾ ಮೆಡಿಕಲ್ ಕೋರ್ಸ್ ಗಳು ಲಭ್ಯವಿದ್ದು, ವಿಫುಲ ಅವಕಾಶಗಳು ದೊರೆಯುತ್ತವೆ ಎಂದರು.
ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಎಮ್.ಶಿವಕುಮಾರ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರಾದ ಚಿತ್ರಲಿಂಗಪ್ಪ, ಪುಟ್ಟರಾಜು, ಶ್ರೀದೇವಿ, ರಾಜಣ್ಣ, ಆರೀಫ್, ರೇಣುಕಾ, ಚೇತನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ತಾಲೂಕು ವ್ಯಾಪ್ತಿಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

