March 2, 2026
0000000003

ಹಿರಿಯೂರು :

ವಾಣಿವಿಲಾಸ ವಿದ್ಯಾಸಂಸ್ಥೆಯು ನಗರದಲ್ಲಿ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, ಈ ವಿದ್ಯಾಸಂಸ್ಥೆಯು ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ ಹಾಗೂ ಸಂಸ್ಕಾರಗಳನ್ನು ಸಹ ಕಲಿಸುತ್ತಿದೆ, ಇಂತಹ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಸಮಾಜದ ಸುಸಂಸ್ಕೃತ ಪ್ರಜೆಯಾಗಿ ರೂಪುಗೊಳ್ಳುತ್ತಾರೆ ಎಂಬುದಾಗಿ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಬೃಹನ್ಮಠದ ಶ್ರೀಶ್ರೀ ಷಡಕ್ಷರಸ್ವಾಮೀಜಿಗಳು ಹೇಳಿದರು.

ನಗರದ ತನ್ಯಾಸಿಗೌಂಡರ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಣಿವಿಲಾಸ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಅತಿಹೆಚ್ಚು ಅಂಕಪಡೆದು, ನೀವು ಓದಿದ ಶಾಲೆಗೆ ಹಾಗೂ ಹೆತ್ತ ತಂದೆ-ತಾಯಿಗಳಿಗೆ ಕೀರ್ತಿ ತರಬೇಕಲ್ಲದೆ, ಉನ್ನತ ವ್ಯಾಸಂಗ ಮಾಡಿ, ಸಮಾಜದ ಉನ್ನತ ಹುದ್ದೆಗಳನ್ನು ಪಡೆದು ಸಮಾಜಮುಖಿಯಾಗಿ ಕೆಲಸ ಮಾಡುವಂತಾಗಬೇಕು ಎಂಬುದಾಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಮಾಜಿ ಅಧ್ಯಕ್ಷರು ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ರಘುನಾಥ್  ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ನಿಮ್ಮ ವಿದ್ಯಾಭ್ಯಾಸದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೇ ಶ್ರದ್ಧೆ, ಆಸಕ್ತಿ ಹಾಗೂ ಏಕಾಗ್ರತೆಯಿಂದ ಅಭ್ಯಾಸ ಮಾಡಿ, ನಿಮ್ಮ ಪೋಷಕರ ಕನಸುಗಳನ್ನು ನನಸಾಗಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬುದಾಗಿ ಹೇಳಿದರು.

ರೆಡ್ ಕ್ರಾಸ್ ನಿರ್ದೇಶಕರಾದ ಶಶಿಕಲಾ ರವಿಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಗಮನ ಕೊಡದೆ ಜೀವನದಲ್ಲಿ ಸೃಜನಶೀಲತೆ, ಕ್ರೀಯಾಶೀಲತೆ ಬೆಳೆಸುವಂತಹ ಕಲೆ, ಸಾಹಿತ್ಯ, ಚಿತ್ರಕಲೆ, ಸಂಗೀತ, ಕ್ರೀಡೆ, ಕ್ಷೇತ್ರಗಳಲ್ಲಿಯೂ ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಹೆಸರು ಪಡೆದು,  ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.

ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮಾನಸ ಮಂಜುನಾಥ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಭಾವಿ ಭವಿಷ್ಯದ ಪ್ರಜೆಗಳಾಗಿದ್ದು, ಈ ನಿಟ್ಟಿನಲ್ಲಿ ಸಮಾಜವನ್ನು ಮುನ್ನಡೆಸಲು ವಿದ್ಯಾರ್ಥಿಗಳಾದ ನೀವು ಶಾಲಾ ಹಂತದಲ್ಲಿಯೇ ಉತ್ತಮ ಶಿಕ್ಷಣವನ್ನು ಪಡೆದು, ಸತತ ಪರಿಶ್ರಮ, ಏಕಾಗ್ರತೆಯಿಂದ ಅಭ್ಯಾಸ ಮಾಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ಕಳೆದ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ವಿದ್ಯಾಸಂಸ್ಥೆಗೆ ಕೀರ್ತಿ ತಂದಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡಿ, ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷರು ಹಾಗೂ ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ, ಖಜಾಂಚಿ ಆರ್.ವಸಂತ್ ಕುಮಾರ್, ಶಿಕ್ಷಣ ಸಂಯೋಜಕರಾದ ಜಾಫರ್, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಶಶಿಕಲಾರವಿಶಂಕರ್, ಮನವಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಮಾನಸಮಂಜುನಾಥ್, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಕಲಾವಿದ ಕೂನಿಕೆರೆ ಮಾರುತೇಶ್, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ, ಶ್ರೀಮತಿಸೌಮ್ಯ, ವ್ಯವಸ್ಥಾಪಕರಾದ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಶ್ರೀಮತಿ ರಚನಾ, ಶಿಕ್ಷಕಿಯರುಗಳಾದ ಶ್ರೀಮತಿ ರಜಿಯಾ, ಶ್ರೀಮತಿ ಗಂಗಮ್ಮ, ಶ್ರೀಮತಿ ರಂಜಿತಾ, ಶ್ರೀಮತಿ ಮುಬೀನಾ, ಶ್ರೀಮತಿ ಸಬೀಹಾ, ಶ್ರೀಮತಿ ದ್ರಾಕ್ಷಾಯಣಿ,, ಶ್ರೀಮತಿ ಮಮತಾ, ಶ್ರೀಮತಿ ಸಾದಿಕಾ, ಶ್ರೀಮತಿ ಸುಲೋಚನಾ, ಶ್ರೀಮತಿ ಹೇಮಲತಾ, ಶ್ರೀಮತಿ ಅಕ್ಷಿತಾ, ಪೂಜಾ, ಕಾವ್ಯ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಕಾರ್ಯಕ್ರಮದ ನಿರ್ವಾಹಕರಾದ ಉಮೇಶ್ ಯಾದವ್, ಶಿವರಾಜ್, ನೃತ್ಯ ಸಂಯೋಜಕರಾದ ಅಜಿತ್, ಸೇರಿದಂತೆ ಶಾಲಾ ಸಿಬ್ಬಂದಿವರ್ಗ, ಹಾಗೂ ಪೋಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

About The Author

Leave a Reply

Your email address will not be published. Required fields are marked *