
ಹಿರಿಯೂರು:
ನಮ್ಮ ದೇಶ ಸ್ವಾತಂತ್ರ್ಯ ನಂತರ ವಿವಿಧ ರಾಜಮನೆತನಗಳ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿದ್ದ ಸಂಸ್ಥಾನಗಳನ್ನು, ವಿವಿಧ ಭೂಪ್ರದೇಶಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಗ್ಗೂಡಿಸಿಕೊಂಡು ಡಾ.ಅಂಬೇಡ್ಕರ್ ನೇತೃತ್ವದಲ್ಲಿ ಒಂದು ಸಂವಿಧಾನವನ್ನು ರಚಿಸಿಕೊಂಡು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ “ ಏಕ ಸಂವಿಧಾನ” ದ ಅಡಿಯಲ್ಲಿ ಸಂವಿಧಾನದ ಆಶಯಗಳನ್ನು ಜಾರಿಗೆ ತಂದ ಮಹತ್ತರವಾದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 77 ನೇ ವರ್ಷದ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತದ ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕೊಡುಗೆ ಅವಿಸ್ಮರಣೀಯವಾದದ್ದು, ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ನಿಯೋಜನೆಗೊಂಡ ಅವರು ಹಲವಾರು ದೇಶಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ, ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ರೂಪುಗೊಳ್ಳಲು ಕಾರಣರಾದವರು ಎಂದರಲ್ಲದೆ,
ನಮ್ಮ ಭಾರತ ದೇಶದ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ, ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗಿದೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆದರ್ಶವನ್ನು ನಮ್ಮ ಸಂವಿಧಾನ ಹೊಂದಿದ್ದು, ಸಂವಿಧಾನದ ಈ ಆಶಯವನ್ನು ಅನುಷ್ಠಾನಗೊಳಿಸುವುದು ಸರ್ಕಾರ ಮತ್ತು ನಮ್ಮೆಲ್ಲರ ಜವಾಬ್ದಾರಿಯಾಗಿದೆ,

ಅಲ್ಲದೆ ವೈವಿದ್ಯತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಅನೇಕ ಜಾತಿ, ಮತ, ಧರ್ಮ ಹಾಗೂ ಭಾಷೆಗಳ ಜನರಿದ್ದರೂ ಇಲ್ಲಿ ಮತೀಯಭಾವ,ಪ್ರತ್ಯೇಕತೆ ಹಾಗೂ ಮೂಲಭೂತ ವಾದಗಳಿಗೆ ಯಾವುದೇ ಅವಕಾಶವಿಲ್ಲ, ದೇಶದ ಜನತೆಗೆ ನ್ಯಾಯ,ಸ್ವಾತಂತ್ರ್ಯ, ಸಮಾನತೆ, ಮತ್ತು ಬಂಧುತ್ವ ಭಾವನೆ ಒದಗಿಸುವುದು ನಮ್ಮ ಗುರಿಯಾಗಿದೆ,
ಈಗಾಗಲೇ ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಸರ್ಕಾರವು ಈ ವರ್ಷದಲ್ಲಿ ರಾಜ್ಯದ ಜನರಿಗೆ ಅನುಕೂಲವಾಗುವ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಮ್ಮ ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 65019, ಗೃಹಲಕ್ಷ್ಮೀ ಯೋಜನೆಯಡಿ 55519, ಫಲಾನುಭವಿಗಳನ್ನು ಗುರುತಿಸಲಾಗಿದ್ದು,
ಗೃಹಜ್ಯೋತಿ ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ 45918 ಹಾಗೂ ನಗರ ಪ್ರದೇಶದಲ್ಲಿ 18860 ಒಟ್ಟಾರೆಯಾಗಿ 64,778, ಫಲಾನುಭವಿಗಳಿಗೆ ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದ್ದು,ಇದರಿಂದ ಮಾಸಿಕ 1.65 ಕೋಟಿ ರೂಗಳ ಹಣವನ್ನು ಸರ್ಕಾರ ವೆಚ್ಚ ಮಾಡಲಾಗುತ್ತಿದೆ ಎಂದರಲ್ಲದೆ,

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತಪ್ರಯಾಣ ಕಲ್ಪಿಸಲಾಗಿದ್ದು, ರಾಜ್ಯದ ಯುವಪದವೀಧರರಿಗೆ ಯುವನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ, ಡಿಪ್ಲೋಮೋ ಪದವೀಧರರಿಗೆ 1500 ಸಹಾಯಧನ, ವಿತರಣೆಗೆ ಚಾಲನೆ ನೀಡಲಾಗಿದ್ದು, ಅಕ್ರಮ-ಸಕ್ರಮ ಯೋಜನೆಯಡಿ, 752 ಮನೆಗಳ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರಲ್ಲದೆ,
ಮಾನ್ಯ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ, ಹಿರಿಯೂರು ನಗರಸಭೆಗೆ 30 ಕೋಟಿ ಮಂಜೂರಾಗಿದ್ದು, ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ಕ್ರಮ ವಹಿಸಲಾಗಿದೆ, ಜಲ ಶುದ್ಧೀಕರಣ ಘಟಕ ನವೀಕರಿಸಲಾಗಿದೆ, ಅಮೃತ ಯೋಜನೆಯಡಿ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಗೆ ಕ್ರಮ ವಹಿಸಲಾಗಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಪೋಲೀಸ್ ಉಪಧೀಕ್ಷಕರಾದ ಶಿವಕುಮಾರ್, ಪೋಲೀಸ್ ನಿರೀಕ್ಷಕರಾದ ಮಹಮದ್ ಸಿರಾಜ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ಪ್ರಮೋದ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾದ ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್.ರಮೇಶ್, ಶಿಕ್ಷಣ ಸಂಯೋಜಕರಾದ ಜಾಫರ್, ದೈಹಿಕ ಶಿಕ್ಷಣ ನಿರ್ದೇಶಕರಾದ ರವಿನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ನಾಗೇಂದ್ರನಾಯ್ಕ, ತಾಲ್ಲೂಕು ರೈತಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಬಗರ್ ಹುಕುಂ ಸಮಿತಿ ಸದಸ್ಯೆ ಡಾ.ಸುಜಾತ, ಕೆಡಿಪಿ ಸದಸ್ಯ ಅಯೂಬ್, ಕೃಷಿಕ ಸಮಾಜದ ನಿರ್ದೇಶಕ ಫಕ್ರುದ್ದೀನ್, ಕೃಷಿ ಬ್ಯಾಂಕ್ ನಿರ್ದೇಶಕ ಸಾದತ್ ವುಲ್ಲಾ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಣರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾಸವಿ ವಿದ್ಯಾಸಂಸ್ಥೆ ಅಂಬೇಡ್ಕರ್ ಜೀವನ ಕುರಿತ ನೃತ್ಯಸಂಭ್ರಮಕ್ಕೆ ಪ್ರಥಮ ಬಹುಮಾನ, ವಾಣಿವಿಲಾಸ ವಿದ್ಯಾಸಂಸ್ಥೆಯ ಸಾವಿತ್ರಿಬಾಯಿಫುಲೆಯವರ ಜೀವನ ಕುರಿತ ನೃತ್ಯ ರೂಪಕಕ್ಕೆ ದ್ವಿತೀಯ ಬಹುಮಾನ, ಗೋಪಾಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೈತರ ಕುರಿತ ನೃತ್ಯ ರೂಪಕಕ್ಕೆ ತೃತೀಯ ಬಹುಮಾನ ನೀಡಲಾಯಿತು.
ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಎಲ್ಲರನ್ನು ಸ್ವಾಗತಿಸಿದರು. ಸೇವಾದಳ ಶಶಿಧರ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ನೆರವೇರಿಸಿದರು.

