
ಹಿರಿಯೂರು:
ಪ್ರಗತಿಪರ ಕೃಷಿಕರಾಗಿ ನಮ್ಮ ತಾಲೂಕಿಗೆ ದ್ರಾಕ್ಷಿ ದಾಳಿಂಬೆ ಪಪ್ಪಾಯ ಇತ್ಯಾದಿ ತೋಟಗಾರಿಕಾ ಬೆಳೆಗಳನ್ನು ಪರಿಚಯ ಮಾಡಿಸಿದ ಕಸವನಹಳ್ಳಿ ಗ್ರಾಮದ ಪ್ರೇಮ್ ನಾಥ್ ರಂಗಸ್ವಾಮಿ ಅವರು ಸುಮಾರು 74 ವರ್ಷಗಳ ತುಂಬ ಜೀವನ ನಡೆಸಿ ಜನವರಿ 22ರಂದು ಅಮೇರಿಕಾದ ಅಟ್ಲಾಂಟಾದಲ್ಲಿ ನಿಧನರಾಗಿದ್ದಾರೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ಅವರು ಹೇಳಿದರು.
ತಾಲ್ಲೂಕಿನ ಕಸವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರೇಮ್ ನಾಥ್ ರಂಗಸ್ವಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ, ಶ್ರೀಯುತರ ಫೋಟೋಕ್ಕೆ ಪುಷ್ಪಾರ್ಚನೆ ಮಾಡಿ ಅಕ್ಷತೆ ಕಾಳು ಹಾಕಿ ಒಂದು ನಿಮಿಷ ಮೌನ ಆಚರಿಸಿ ನಂತರ ಅವರು ಮಾತನಾಡಿದರು.
ಜ್ಞಾನಿಗಳು, ತಿಳುವಳಿಕೆಯುಳ್ಳವರು, ಹಿರಿಯ ವಕೀಲರಾಗಿ, ಕೆಲಸ ಮಾಡಿ ಅಮೇರಿಕಾದಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ನೆಲೆಸಿದ್ದರು. ಇವರು ನಮ್ಮ ಸರ್ಕಾರಿ ಶಾಲೆಗೆ ಎರಡು ಎಕರೆ ಜಮೀನನ್ನು ದಾನವಾಗಿ ನೀಡುವ ಮೂಲಕ ತಮ್ಮ ಹೆಸರು ಉಳಿಸಿ ಹೋಗಿದ್ದಾರೆ. ನೇರ ನಿಷ್ಠೂರವಾದಿಯಾದ ಇವರು ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಬದ್ಧತೆ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ್ದರು. ಎಂದರಲ್ಲದೆ,

ರಾಜ್ಯದ ಹಿರಿಯ ನ್ಯಾಯವಾದಿಗಳಾದ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್, ಮಾಜಿ ಸಭಾಪತಿ ಎಂ.ಸಿ.ನಾಣಯ್ಯ, ಇವರ ಜೊತೆಯಲ್ಲಿ ಕಾನೂನು ವ್ಯಾಸಾಂಗ ಮಾಡಿದ್ದರು. ಆದ್ರೆ ಕೃಷಿಯನ್ನು ಆರಿಸಿಕೊಂಡು ಹಳ್ಳಿಗೆ ಬಂದರು. ಇಲ್ಲಿ ಮಾಜಿ ಸಚಿವರಾದ ಏಕಾಂತಯ್ಯ, ಬಾಲುಅಯ್ಯರ್ , ಗೋಪಿನಾಥ್. ಇನ್ನಿತರ ಪ್ರಗತಿಪರ ಕೃಷಿಕರ ಜೊತೆ ಸೇರಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಈ ಭಾಗಕ್ಕೆ ಪರಿಚಯ ಮಾಡಿಸಿದರು. ಇವರ ಒಡನಾಡಿಗಳು ಇಂಥವರನ್ನು ಕಳೆದುಕೊಂಡು ಸಮಾಜ ಬಡವಾಗುತ್ತಿದೆ ಎಂಬುದಾಗಿ ಅವರು ಹೇಳಿದರು.
ಆಗಾಗ ಭಾರತಕ್ಕೆ ಬಂದು ಸಂಬಂಧಿಕರು ಸ್ನೇಹಿತರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಇಂಥ ದೇಶಾಭಿಮಾನಗಳ ಸಂಖ್ಯೆ ಹೆಚ್ಚಾಗಲಿ ಇವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂಬುದಾಗಿ ಅವರು ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಆರ್.ಪ್ರಕಾಶ್, ಎ.ಶ್ರೀನಿವಾಸ್, ಜಿ.ರಂಗಸ್ವಾಮಿ, ಅಶ್ವತ್ ಕುಮಾರ್, ಶಾಲಾ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರಾದ ರಂಗನಾಥ್, ಸಹ ಶಿಕ್ಷಕರು, ಅಂಗನವಾಡಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

