
ಹಿರಿಯೂರು :
ತಾಲ್ಲೂಕಿನ ಗೌನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಕುಡಿಯಲು ಹನಿ ನೀರಿಲ್ಲದೆ ಜನರು ಪರದಾಡುತ್ತಿದ್ದರೂ, ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ಘೋರ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಈಗ ನೇರ ಹೋರಾಟಕ್ಕೆ ಇಳಿಯುವ ಮೂಲಕ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ತಿಂಗಳುಗಳಿಂದ ನೀರಿನ ಸಮಸ್ಯೆಯಿದ್ದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಸ್ಥಳೀಯ ಭಾಷೆಯಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ” ಹನಿ ನೀರಿಗಾಗಿ ನಾವು ಇಲ್ಲಿ ಪರದಾಡುತ್ತಿದ್ದೇವೆ, ಆದರೆ ಎಮ್ಮೆ ಚರ್ಮದ ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ. ಇವರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲವೇ?” ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಷ್ಟೇ ಅಲ್ಲದೆ, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ ಜನರು, “ಓಟು ಬಿಟ್ಟ ಅಧಿಕಾರಿಗಳು ಎಲ್ಲರೂ ಒಟ್ಟಿಗೆ ಸೇರಿ ಏನು ತಿನ್ನುತ್ತಿದ್ದಾರೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಪಿಡಿಓಗಳಿಗೆ ಮನವಿ ನೀಡಿ ತಿಂಗಳುಗಳೇ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ಸಮಯದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ಈಗ ಜನರ ಸಂಕಷ್ಟಕ್ಕೆ ಕಿವಿಯಾಗುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಕುಡಿಯುವ ನೀರಿಗಾಗಿ ಗ್ರಾಮದ ಹೆಣ್ಣುಮಕ್ಕಳು ಕಿಲೋಮೀಟರ್ ಗಟ್ಟಲೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ನಮ್ಮ ನೀರಿನ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರವಾದ ಪ್ರತಿಭಟನೆ ನಡೆಸುವುದಾಗಿ ಗೌನಹಳ್ಳಿಯ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ವರದಿ : ಪವರ್ ಫೋಕಸ್ ನ್ಯೂಸ್ ಅರ್ಜುನ್ ಬ್ಯಾಡರಹಳ್ಳಿ

