
ಹಿರಿಯೂರು :
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನವನ್ನು ರಚಿಸುವ ಮೂಲಕ ಆದರ್ಶ ಪ್ರಜಾಪ್ರಭುತ್ವವನ್ನು ದೇಶದ ಜನತೆಗೆ ನೀಡಿದ್ದು, ಸಂವಿಧಾನದ ಆಶಯಗಳು ಈಡೇರಿದಾಗ ಮಾತ್ರ ಜನತಂತ್ರ ಉಳಿದು ಸಂವಿಧಾನವು ಬಲಗೊಳ್ಳಲಿದೆ ಎಂಬುದಾಗಿ ನಿವೃತ್ತ ಪ್ರಾಚಾರ್ಯರಾದ ಜಿ.ರಾಮಚಂದ್ರ ಅವರು ಹೇಳಿದರು.
ನಗರದ ನೆಹರುಮೈದಾನದ ರೋಟರಿ ಸಭಾಂಗಣದಲ್ಲಿ ಜನತಂತ್ರ ಉಳಿಸಿ ಆಂದೋಲನ -ಕರ್ನಾಟಕ ಜಿಲ್ಲಾ ಘಟಕ ಚಿತ್ರದುರ್ಗ ಇವರು ಜನತಂತ್ರದ ಸವಾಲುಗಳು ಮತ್ತು ಪರಿಹಾರಗಳು ಈ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ “ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಜನತಂತ್ರದ ಆಧಾರ ಸ್ಥಂಭಗಳು ಇದನ್ನು ನಾಶಗೊಳಿಸಿಲು ಬಂಡವಾಳಶಾಹಿಗಳು ಮತ್ತು ಕೋಮುವಾದಿಗಳು ಪ್ರಯತ್ನಪಡುತ್ತಿದ್ದು, ಅದರಿಂದ ದೂರವಾಗಲು ರೈತರು ಮಹಿಳೆಯರು ಯುವಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಜನತಂತ್ರ ಆಂದೋಲನ ಕೆಲಸಮಾಡುತ್ತಿದೆ. ಮತದ ಮೌಲ್ಯ ಅರಿತು ಮತದಾನ ಮಾಡಿದಾಗ ಜನತಂತ್ರವನ್ನು ಕಾಪಾಡಿಕೊಳ್ಳಬಹುದು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವಯಾನ ಸಾಹಿತ್ಯ ಮತ್ತು ಸಾಂಸ್ಕೃತಿಕ ಘಟಕದ ರಾಜ್ಯ ಸಂಚಾಲಕರಾದ ಡಾ.ವಿ.ಬಸವರಾಜು ಮಾತನಾಡಿ, ಪ್ರಭುತ್ವಗಳು ಬಂಡವಾಳಶಾಹಿಗಳ ಕೈವಶವಾಗುತ್ತಿರುವ ಕಾಲದಲ್ಲಿ ಜನತೆ ಸಂವಿಧಾನದ ಪರಿಕಲ್ಪನೆಯನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಅನಿವಾರ್ಯತೆ ಇದೆ ಎಂದರಲ್ಲದೆ,
ಶಿಕ್ಷಣ ಅಧಿಕಾರ ಸಂಪತ್ತು ಕೆಲವೇ ಜನರ ಸ್ವತ್ತಾಗದೆ, ಅದು ದೇಶದ ಸಮಸ್ತ ವಂಚಿತರಿಗೂ ದೊರೆಯುವಂತಾಗಬೇಕು ಎಂಬುದೇ ಸಂವಿಧಾನದ ಆಶಯವಾಗಿದೆ. ಆದುದರಿಂದ ಮತಗಳು ಮಾರಾಟದ ವಸ್ತುವಾಗದೆ ಮೌಲ್ಯಗಳಾಗಿ ರೂಪುಗೊಂಡಾಗ ಮಾತ್ರ ಆಶೋತ್ತರದ ಜನತಂತ್ರ ವ್ಯವಸ್ಥೆ ನೆಲೆಗೊಳ್ಳಲು ಸಾಧ್ಯ ಎಂಬುದಾಗಿ ಅವರು ಹೇಳಿದರು.
ಚಿತ್ರದುರ್ಗದ ಅಂಬೇಡ್ಕರ್ ವೇದಿಕೆಯ ಆರ್.ಮಂಜುನಾಥ್ ‘ಜನತಂತ್ರದ ಸವಾಲುಗಳು’ ಎಂಬ ವಿಷಯ ಕುರಿತು ಮಾತನಾಡಿ, ತಾರತಮ್ಯಗಳು ಗೊತ್ತಿಲ್ಲದೆ ಹಲವು ರೂಪಗಳಲ್ಲಿ ಜನತಂತ್ರವನ್ನು ಆವರಿಸಿಕೊಂಡಿದ್ದು ತಮ್ಮ ಹಕ್ಕಿಗಾಗಿ ಹೋರಾಟಕ್ಕಿಳಿದ ಹೋರಾಟಗಾರರಿಗೂ ಸಹ ಇಂದು ಜಾಮೀನು ಸಿಗದಂತಹ ಪರಿಸ್ಥಿತಿಗಳು ಎದುರಾಗುತ್ತಿವೆ.

ಇತ್ತೀಚೆಗೆ ಮತಗಳ್ಳತನವೆಂಬುದು ಜನತಂತ್ರಕ್ಕೆ ಬಹುದೊಡ್ಡ ಆಪತ್ತನ್ನು ತಂದೊಡ್ಡಿದ್ದು, ರಾಜಕೀಯ ಅತಿರೇಕಗಳು ಜನತೆಯ ಬದುಕನ್ನು ದುಸ್ಥರಗೊಳಿಸಿವೆ. ಬಂಡವಾಳಶಾಹಿಗಳನ್ನು ಸರ್ಕಾರವೇ ದೊಡ್ಡಮಟ್ಟದಲ್ಲಿ ಪೋಷಿಸುತ್ತಿದ್ದು, ಸಾಮಾನ್ಯರ ಪರಿಸ್ಥಿತಿ ಬಿಗಿಡಾಯಿಸಲು ಕಾರಣವಾಗಿದೆ ಎಂಬುದಾಗಿ ಅವರು ಹೇಳಿದರು.
ಚಿಂತಕ ಶಿವಶಂಕರಸೀಗೆಹಟ್ಟಿ ಮಾತನಾಡಿ, ಸಂಸದೀಯ ಪ್ರಜಾಪ್ರಭುತ್ವವು ಜನತೆಯನ್ನು ಪ್ರತಿನಿಧಿಸುವ ಒಂದು ರಾಜಕೀಯ ತತ್ವಾದರ್ಶವಾಗಿದ್ದು, ಅಂಬೇಡ್ಕರ್ ಅವರು ಹೇಳಿದಂತೆ ರಕ್ತಪಾತವಿಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮೂಲಕ ಕಲ್ಯಾಣ ರಾಜ್ಯವನ್ನು ಸ್ಥಾಪಿಸುವುದಕ್ಕೆ ಮೊದಲಾಗಬೇಕಿದೆ ಎಂಬುದಾಗಿ ಅಭಿಪ್ರಾಯಪಟ್ಟರು.
ಸಮಾರೋಪ ಸಮಾರಂಭದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ರಾಜ್ಯಘಟಕದ ಅಧ್ಯಕ್ಷರಾದ ಹೀರೆಹಳ್ಳಿ ಮಲ್ಲಿಕಾರ್ಜುನ್ ಅವರು ನಿರ್ಣಯ ಮತ್ತು ಕ್ರಿಯಾಯೋಜನೆಗಳನ್ನು ಮಂಡಿಸಿದರು. ಜನತಂತ್ರ ಉಳಿಸಿ ಆಂದೋಲನದ ರಾಜ್ಯ ಸಂಚಾಲಕರಾದ ಪ್ರೊ.ಸಿ.ಕೆ.ಮಹೇಶ್ ಅನುಮೋದಿಸಿದರು.
ಈ ಕಾರ್ಯಕ್ರಮದಲ್ಲಿ ನವಯಾನ ಬುದ್ದ ಧಮ್ಮ ಸಂಘದ ಟಿ.ರಾಮು, ಸಿ.ಎ ಚಿಕ್ಕಣ್ಣ,ಕೆ.ಕುಮಾರ್, ಪರಿಶಿಷ್ಟಜಾತಿ/ಪರಿಶಿಷ್ಟಪಂಗಡ ನೌಕರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಶಂಕರ್, ನಿವೃತ್ತ ಡಿ.ಡಿ.ಪಿ.ಯು. ಕೆ.ರುದ್ರಪ್ಪ, ಹಿರಿಯ ಮುಖಂಡರಾದ ಎಂ.ಡಿ.ರವಿ, ಕೂನಿಕೆರೆರಾಮಣ್ಣ, ಮಾರುತಿ ಸಣ್ಣಕ್ಕಿ, ಕೆ.ರಾಮಚಂದ್ರಪ್ಪ, ಆರ್.ರಾಮಣ್ಣ ಕೃಷ್ಣಪ್ಪ, ಎಸ್.ಚಿಕ್ಕಣ್ಣ ,ಡಯಟ್ ಉಪನ್ಯಾಸಕರಾದ ರಾಮಚಂದ್ರಪ್ಪ, ಡಾ.ಪಾರ್ವತಮ್ಮ, ಹುಚ್ಚವ್ವನಹಳ್ಳಿ ವೆಂಕಟೇಶ್, ಗುರುಮೂರ್ತಿ, ಬಿ.ಶಿವಮೂರ್ತಿ, ಭೀಮಣ್ಣ, ಆರ್.ತಿಪ್ಪೇಸ್ವಾಮಿ ಓಬಳನಾಯಕ, ನಿವೃತ್ತ ಡೀನ್ ಡಾ.ಚಂದ್ರಪ್ಪ, ಕಿರಣ್ ಕುಮಾರ್, ಚಮನ್ ಶರೀಫ್, ಎಸ್.ಜಿ.ರಂಗಸ್ವಾಮಿಸಕ್ಕರ, ಡಾ.ಶಿವಣ್ಣ ರಂಗೇನಹಳ್ಳಿ, ಪತ್ರಕರ್ತ ಮಹೇಶ್ ಡಿ.ನಾಗರಾಜ್ ಡಾ.ಕುಮಾರ್ ಕಸವನಹಳ್ಳಿ, ಮಂಜುನಾಥಲೋಕಿಕೆರೆ, ಟಿ.ದೃವಕುಮಾರ್ ಡಾ.ಶಫಿವುಲ್ಲಾ, ರುದ್ರಮುನಿ, ಟಿ.ಶ್ರೀನಿವಾಸ್ ಕೂನಿಕೆರೆಮಾರುತೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

